ರಜನಿಕಾಂತ್ ಪುತ್ರಿ ಐಶ್ವರ್ಯಾ ಹಾಗೂ ನಟ ಧನುಶ್ಗೆ ಅಧಿಕೃತವಾಗಿ ವಿಚ್ಛೇದನ ದೊರೆತಿದೆ. ಚೆನ್ನೈ ಫ್ಯಾಮಿಲಿ ಕೋರ್ಟ್ ಇವರಿಗೆ ವಿಚ್ಛೇದನ ಮಂಜೂರು ಮಾಡಿದೆ. ಇವರ 20 ವರ್ಷದ ದಾಂಪತ್ಯ ಅಂತ್ಯವಾಗಿದೆ.
ತಮಿಳು ನಟ ಧನುಷ್ ಮತ್ತು ಐಶ್ವರ್ಯಾ ರಜನಿಕಾಂತ್ ಅವರಿಗೆ ಚೆನ್ನೈನ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ. ಧನುಷ್ ಅವರು ನಿರ್ದೇಶಕ ಕಸ್ತೂರಿ ರಾಜಾ ಅವರ ಮಗನಾಗಿದ್ದು, ಐಶ್ವರ್ಯಾ ಅವರು ‘ಸೂಪರ್ ಸ್ಟಾರ್’ ರಜನಿಕಾಂತ್ ಪುತ್ರಿಯಾಗಿದ್ದಾರೆ. ಐಶ್ವರ್ಯಾ ಮತ್ತು ಧನುಷ್ 2004ರಲ್ಲಿ ಮದುವೆಯಾಗಿದ್ದರು. ಈ ಜೋಡಿಗೆ ಇಬ್ಬರು ಮಕ್ಕಳಿದ್ದಾರೆ.
2004ರ ನ.18ರಂದು ವಿವಾಹವಾಗಿದ್ದ ಧನುಷ್ ಮತ್ತು ಐಶ್ವರ್ಯಾ 18 ವರ್ಷಗಳ ದಾಂಪತ್ಯ ಜೀವನವನ್ನು ಅಂತ್ಯಗೊಳಿಸುತ್ತಿರುವುದಾಗಿ 2022ರ ಜನವರಿಯಲ್ಲಿ ಘೋಷಿಸಿದ್ದರು. ಬಳಿಕ ಕಾನೂನಾತ್ಮಕವಾಗಿ ಬೇರೆಯಾಗಲು, ವಿಚ್ಛೇದನ ಪಡೆಯಲು ಕೌಟುಂಬಿಕ ನ್ಯಾಯಾಲಯದ ಮೊರೆ ಹೋಗಿದ್ದರು. ಕಳೆದ ನ.21ರಂದು ಕೌಟುಂಬಿಕ ನ್ಯಾಯಾಲಯದ ನ್ಯಾ. ಸುಭಾದೇವಿ ಮುಂದೆ ಹಾಜರಾಗಿದ್ದ ದಂಪತಿ, “ಒಟ್ಟಿಗೆ ಬದುಕುವುದು ಸಾಧ್ಯವಿಲ್ಲ, ವಿಚ್ಛೇದನ ನಿರ್ಧಾರ ಅಚಲವಾಗಿದೆ” ಎಂದು ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯವು ವಿಚ್ಛೇದನ ಮಂಜೂರು ಮಾಡಿದೆ.
ಧನುಶ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಐಶ್ವರ್ಯಾ ಸಹ ಸಿನಿಮಾ ನಿರ್ದೇಶಕಿಯಾಗಿದ್ದು, ಧನುಶ್ ನಟನೆಯ ‘3’, ಇತ್ತೀಚೆಗೆ ಬಿಡುಗಡೆ ಆದ ರಜನೀಕಾಂತ್ ನಟನೆಯ ‘ಲಾಲ್ ಸಲಾಂ’ ಇನ್ನೂ ಕೆಲ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಸ್ಟುಡಿಯೋ ಸೇರಿದಂತೆ ಕೆಲವು ಉದ್ಯಮಗಳನ್ನು ಸಹ ನಿಭಾಯಿಸುತ್ತಿದ್ದಾರೆ.
ಧನುಶ್ ಹೆಸರು ಇತ್ತೀಚೆಗೆ ಸಿನಿಮಾಯೇತರ ಕಾರಣಕ್ಕೆ ಹೆಚ್ಚು ಸುದ್ದಿಗೆ ಬರುತ್ತಿದೆ. ನಯನತಾರಾ, ಧನುಶ್ ವಿರುದ್ಧ ಸುದೀರ್ಘ ಪತ್ರ ಬರೆದಿದ್ದು, ಧನುಶ್ ಅನ್ನು ನೀಚ ಇತ್ಯಾದಿ ಪದಗಳನ್ನು ಬಳಸಿ ನಿಂದಿಸಿದ್ದಾರೆ. ಇದೀಗ ಧನುಶ್, ನಯನತಾರಾ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ಧನುಶ್ ನಿರ್ಮಾಣ ಮಾಡಿದ್ದ ‘ನಾನುಂ ರೌಡಿ ದಾ’ ಸಿನಿಮಾದ ಕೆಲವು ದೃಶ್ಯಗಳನ್ನು ಡಾಕ್ಯುಮೆಂಟರಿಯಲ್ಲಿ ಬಳಸಿದ್ದಕ್ಕೆ ಧನುಶ್, ನಯನತಾರಾ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದರ ನಡುವೆ ಈಗ ಧನುಶ್ಗೆ ವಿಚ್ಛೇದನ ಸಹ ದೊರೆತಿದೆ.