ಒಂದೆಡೆ ಪುಷ್ಪ 2 ಸಿನಿಮಾ ಭರ್ಜರಿ ಪ್ರದರ್ಶನ ಕಾಣ್ತಿದೆ. ಮತ್ತೊಂದೆಡೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಸಂಧ್ಯಾ ಥಿಯೇಟರ್ ಘಟನೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್, ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಡಪಲ್ಲಿ ಪೊಲೀಸರು ದಾಖಲಿಸಿರುವ ಪ್ರಕರಣವನ್ನು ವಜಾಗೊಳಿಸುವಂತೆ ಅಲ್ಲು ಅರ್ಜುನ್ ಮನವಿ ಮಾಡಿದ್ದಾರೆ.
ಡಿಸೆಂಬರ್ 4ರಂದು ದುರ್ಘಟನೆ ನಡೆಯಿತು. ‘ಪುಷ್ಪ 2’ ಚಿತ್ರದ ಪ್ರೀಮಿಯರ್ ಶೋ ಹೈದರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ನಡೆಯಿತು. ಈ ವೇಳೆ ಅಲ್ಲು ಅರ್ಜುನ್ ಕೂಡ ಬಂದಿದ್ದರು. ಥಿಯೇಟರ್ನಲ್ಲಿ ನೂಕುನುಗ್ಗಲು ಉಂಟಾಗಿತ್ತು. ಈ ವೇಳೆ ಉಂಟಾದ ಕಾಲ್ತುಳಿತದಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಕಾಲ್ತುಳಿತ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆ ಪ್ರಕರಣದಲ್ಲಿ ಅಲ್ಲು ಅರ್ಜುನ್ ಅವರನ್ನು ಕೂಡ ಪೊಲೀಸರು ಆರೋಪಿಯನ್ನಾಗಿ ಸೇರಿಸಿದ್ದರು.
ಅಲ್ಲು ಅರ್ಜುನ್ ಅವರು ಈಗ ಕೋರ್ಟ್ ಮೆಟ್ಟಿಲೇರಿದ್ದಾರೆ. ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣವನ್ನು ರದ್ದುಗೊಳಿಸುವಂತೆ ಅಲ್ಲು ಅರ್ಜುನ್ ಅರ್ಜಿಯಲ್ಲಿ ಕೋರಿದ್ದಾರೆ. ಶೀಘ್ರವೇ ಈ ಅರ್ಜಿ ವಿಚಾರಣೆಗೆ ಬರಲಿದೆ. ಸದ್ಯ, ಸಂತ್ರಸ್ತ ಕುಟುಂಬಕ್ಕೆ ಇವರು 25 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ.
ಈ ಘಟನೆ ಕುರಿತು ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್, ಸಿನಿಮಾ ಘಟಕ ಹಾಗೂ ಥಿಯೇಟರ್ ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಜನರಿಗೆ ಯಾವುದೇ ಮಾಹಿತಿ ನೀಡಿಲ್ಲ. ಭದ್ರತೆ ಒದಗಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಈಗಾಗಲೇ ಮೂವರನ್ನು ಬಂಧಿಸಿದ್ದಾರೆ.
ಇತ್ತೀಚಿಗೆ ಟಾಲಿವುಡ್ ನಟ ಅಲ್ಲು ಅರ್ಜುನ್ ವಿಡಿಯೋ ಶೇರ್ ಮಾಡಿದ್ರು. ರೇವತಿ ಸಾವಿನ ಬಗ್ಗೆ ಮಾತಾಡಿದ ನಟ ಅಲ್ಲು ಅರ್ಜುನ್, ಸಂಧ್ಯಾ ಥಿಯೇಟರ್ ನಲ್ಲಿ ನಡೆದ ಘಟನೆ ಕೇಳಿ ನನಗೂ ಆಘಾತವಾಯ್ತು.ರೇವತಿ ಅವರ ಸಾವಿಗೆ ನಾನು ಸಂತಾಪ ಸೂಚಿಸುತ್ತೇನೆ. ನನ್ನ ಪರವಾಗಿ ರೇವತಿ ಅವರ ಕುಟುಂಬಕ್ಕೆ 25 ಲಕ್ಷ ರೂ. ನೀಡುವೆ. ನಮ್ಮ ತಂಡದಿಂದ ಯಾವುದೇ ಸಹಾಯವನ್ನು ನೀಡಲು ನಾವು ಸಿದ್ಧರಿದ್ದೇವೆ. ಅವರಿಗೆ ನನ್ನ ಕೈಲಾದಷ್ಟು ಸಹಾಯ ಮಾಡುತ್ತೇನೆ. ಸದಾ ಅವರ ಜೊತೆ ಇರುತ್ತೇನೆ. ಶೀಘ್ರದಲ್ಲೇ ರೇವತಿ ಕುಟುಂಬವನ್ನು ಖುದ್ದಾಗಿ ಭೇಟಿ ಮಾಡುವುದಾಗಿ ಬನ್ನಿ ಭರವಸೆ ನೀಡಿದರು. ಅಲ್ಲು ಅರ್ಜುನ್ ಟ್ವಿಟ್ಟರ್ ನಲ್ಲಿ ವಿಡಿಯೋ ಕೂಡ ಶೇರ್ ಮಾಡಿದ್ರು.
‘ಪುಷ್ಪ 2’ ಸಿನಿಮಾ ರಿಲೀಸ್ ಆಗಿ ವಾರ ಕಳೆದಿದೆ. ಈ ಚಿತ್ರ ಒಂದು ವಾರದೊಳಗೆ ಸಾವಿರ ಕೋಟಿ ರೂಪಾಯಿ ಗಳಿಕೆ ಮಾಡಿದೆ. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸುಕುಮಾರ್ ನಿರ್ದೇಶನದ ಈ ಚಿತ್ರಕ್ಕೆ ಮೈತ್ರಿ ಮೂವೀ ಮೇಕರ್ಸ್ ಬಂಡವಾಳ ಹೂಡಿದೆ.