ಪ್ರತಿ ವರ್ಷ ಮಾರ್ಚ್ 8 ರಂದು ಅಂತಾರಾಷ್ಟ್ರೀಯ ಮಹಿಳಾ ದಿನ (International Women’s Day – IWD) ಆಚರಿಸಲಾಗುತ್ತದೆ. ಈ ದಿನ ಲಿಂಗ ಸಮಾನತೆ, ಮಹಿಳಾ ಹಕ್ಕುಗಳು ಮತ್ತು ಜಾಗತಿಕ ಮಹಿಳಾ ಸಾಧನೆಗಳನ್ನು ಗೌರವಿಸಲು ಸಮರ್ಪಿತವಾಗಿದೆ. ಮಹಿಳೆಯರು ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯವಾಗಿ ಅತ್ಯುತ್ತಮ ಸಾಧನೆಗಳನ್ನು ಮಾಡಿರುವುದನ್ನು ಈ ದಿನವನ್ನು ಶ್ರದ್ಧೆಯಿಂದ ಆಚರಿಸುವ ಮೂಲಕ ಗುರುತಿಸಲಾಗುತ್ತದೆ.
ಮಹಿಳಾ ದಿನಾಚರಣೆಯ ಇತಿಹಾಸ
ಅಂತಾರಾಷ್ಟ್ರೀಯ ಮಹಿಳಾ ದಿನದ ಹುಟ್ಟು 20ನೇ ಶತಮಾನದ ಪ್ರಾರಂಭದಲ್ಲಿ ಕಾರ್ಮಿಕ ಚಳುವಳಿಗಳಿಂದ ಆಗಿದೆ. 1908ರಲ್ಲಿ ನ್ಯೂಯಾರ್ಕ್ ನಲ್ಲಿ ಜವಳಿ ಕೈಗಾರಿಕೆ ಮಹಿಳಾ ಕಾರ್ಮಿಕರು ಕಡಿಮೆ ಕೆಲಸದ ಗಂಟೆಗಳು, ಉತ್ತಮ ವೇತನ ಹಾಗೂ ಮತದಾನದ ಹಕ್ಕುಗಳಿಗಾಗಿ ಪ್ರತಿಭಟನೆ ನಡೆಸಿದರು. ಇದರ ಸ್ಮರಣಾರ್ಥ 1909ರ ಫೆಬ್ರವರಿ 28 ರಂದು ಅಮೇರಿಕಾದ ಸಮಾಜವಾದಿ ಪಕ್ಷವು ಮೊದಲ ರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತ್ತು.
1910ರಲ್ಲಿ ಕೋಪನ್ಹೇಗನ್ ನಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ಅವರು ಈ ದಿನವನ್ನು ಜಾಗತಿಕವಾಗಿ ಆಚರಿಸುವಂತೆ ಪ್ರಸ್ತಾಪಿಸಿದರು. ನಂತರ 1911ರಲ್ಲಿ ಜರ್ಮನಿ, ಆಸ್ಟ್ರಿಯಾ, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲ್ಯಾಂಡ್ ನಲ್ಲಿ ಮೊದಲಬಾರಿಗೆ ಈ ದಿನವನ್ನು ಆಚರಿಸಿದ್ದವು.
1975ರಲ್ಲಿ ವಿಶ್ವಸಂಸ್ಥೆಯು ಈ ದಿನವನ್ನು ಅಧಿಕೃತವಾಗಿ ಅಳವಡಿಸಿಕೊಂಡು, 1977ರಲ್ಲಿ ಮಾರ್ಚ್ 8 ಅನ್ನು ಮಹಿಳಾ ಹಕ್ಕುಗಳು ಮತ್ತು ವಿಶ್ವ ಶಾಂತಿಗಾಗಿ ನಿಗದಿತ ದಿನವೆಂದು ಘೋಷಿಸಿತ್ತು. ಈ ರೀತಿಯಾಗಿ, ಈ ದಿನದ ಮಹತ್ವ ವರ್ಷಕ್ಕೊಂದು ಹೆಚ್ಚುತ್ತಿದೆ.
ಅಂತಾರಾಷ್ಟ್ರೀಯ ಮಹಿಳಾ ದಿನ 2025 – ಥೀಮ್ ಮತ್ತು ಮಹತ್ವ
ಪ್ರತಿ ವರ್ಷ ಮಹಿಳಾ ದಿನವನ್ನು ಒಂದು ವಿಶೇಷ ಥೀಮ್ ನೊಂದಿಗೆ ಆಚರಿಸಲಾಗುತ್ತದೆ. 2025ರ ಥೀಮ್ ಮಹಿಳೆಯರ ಸಬಲೀಕರಣ, ಲಿಂಗ ಸಮಾನತೆ, ಮತ್ತು ಪ್ರಗತಿ ಬಗ್ಗೆ ಕೇಂದ್ರೀಕೃತವಾಗಿರಲಿದೆ. ಸರ್ಕಾರಗಳು, ಸಂಸ್ಥೆಗಳು ಮತ್ತು ಜನತೆ ಈ ಥೀಮ್ನಡಿ ಮಹಿಳೆಯರ ಹಕ್ಕುಗಳ ಪರ ಹೋರಾಟ, ಸಮಾನ ಅವಕಾಶಗಳ ಒದಗುವಿಕೆ ಮತ್ತು ಸಾಮಾಜಿಕ, ಆರ್ಥಿಕ ಪ್ರಗತಿಯ ಪಥದತ್ತ ಮಹಿಳೆಯರನ್ನು ಪ್ರೇರೇಪಿಸಲು ಕಾರ್ಯನಿರ್ವಹಿಸಲಿವೆ.
ಮಹಿಳಾ ದಿನದ ಆಚರಣೆಯ ಅಗತ್ಯತೆ
- ಮಹಿಳಾ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು
- ಸಮಾನ ವೇತನ, ಕೆಲಸದ ಅವಕಾಶ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಗಮನ ಹರಿಸುವುದು
- ಮಹಿಳೆಯರ ಸಾಧನೆಗಳನ್ನು ಗೌರವಿಸುವುದು
- ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಉತ್ತೇಜಿಸುವುದು
ಮಹಿಳೆಯರು ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸುತ್ತಿದ್ದಾರೆ. ಮಾರ್ಚ್ 8 ಮಹಿಳಾ ಸಾಧನೆಗಳನ್ನು ಗುರುತಿಸಲು, ಲಿಂಗ ಸಮಾನತೆಯ ಪ್ರಾಮುಖ್ಯತೆ ತಿಳಿಸಲು ಹಾಗೂ ಹೊಸ ಪೀಳಿಗೆಗೆ ಸ್ಪೂರ್ತಿ ಒದಗಿಸಲು ಒಂದು ಮಹತ್ತರ ದಿನವಾಗಿದೆ.