ಸಾಮಾನ್ಯವಾಗಿ ಮನುಷ್ಯರು ದೇವಸ್ಥಾನ, ಮಂದಿರ, ಮಸಿದಿ, ಚರ್ಚ್ ಗಳಿಗೆ ಹೋಗೊದು, ದೇವರು ನಮಗೆ ಒಳ್ಳೆಯ ಆಯುರ್, ಆರೋಗ್ಯ ದಯಪಾಲಿಸಲಿ ಅಂತ. ಆದರೆ ನಾವು ಅಂದುಕೊಳ್ಳುವುದು ಒಂದು. ಆಗೋದು ಮತ್ತೊಂದು. ಇಲ್ಲಿ ಒಂದು ಕುಟುಂಬ ಮದೀನಾ ದರ್ಶನಕ್ಕೆ ತೆರಳುತ್ತಿದ್ದ ವೇಳೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ರಣ ಆಕ್ಸಿಡೆಂಟ್ನಲ್ಲಿ ಒಂದೇ ಕುಟುಂಬದ ಮೂರು ಜನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಫಯಾಜ್ ರೋಣ, ಪತ್ನಿ ಆಫ್ರಿನಾ ಬಾನು, ಸಹೋದರನ ಮಗ ಆಯಾನ್ ಮೃತ ದುರ್ದೈವಿಗಳು.ಕಳೆದ ಮಾರ್ಚ್ 26ರಂದು ಅರೇಬಿಯಾದಲ್ಲಿ ಹಲವು ವರ್ಷಗಳಿಂದ ನೆಲೆಸಿರುವ ಸಹೋದರನ ಕುಟುಂಬದ ಜೊತೆ ಪವಿತ್ರ ಮದೀನಾಕ್ಕೆ ಹೊರಟಿದ್ದರು. ಇದೇ ವೇಳೆ ಅವರು ಪ್ರಯಾಣಿಸುತ್ತಿದ್ದ ಲ್ಯಾಂಡ್ ಕ್ರೂಸರ್ ಕಾರಿನ ಟೈರ್ ಏಕಾಏಕಿ ಸ್ಫೋಟಗೊಂಡಿದೆ. ಮಾರ್ಗ ಮಧ್ಯೆ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ್ದಾರೆ. ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಫಯಾಜ್ ರೋಣ ಅವರ ಇಬ್ಬರು ಮಕ್ಕಳೂ ಸಹ ಗಂಭೀರ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.