ತಿರುವನಂತಪುರ: ಇಂದು ಸಂಜೆ 4 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಅಂದರೆ ಐದು ಗಂಟೆಗಳ ಕಾಲ ಕೇರಳದ ತಿರುವನಂತಪುರ ಅಂತಾರಾಷ್ಟ್ರೀಯ ಏರ್ಪೋರ್ಟ್ನಲ್ಲಿ ವಿಮಾನ ಹಾರಾಟ ಬಂದ್ ಆಗಲಿದೆ. ಇಂದು ತಿರುವನಂತಪುರದ ಪ್ರಸಿದ್ಧ ಪದ್ಮನಾಭಸ್ವಾಮಿ ದೇವಾಲಯದ ಅಲ್ಪಸ್ಸಿ ಅರಟು ಮೆರವಣಿಗೆ ನಡೆಯಲಿದೆ. ಮೆರವಣಿಗೆ ವೇಳೆ ಆಗಸದಲ್ಲಿ ಯಾವುದೇ ವಿಮಾನ ಹಾರಾಟ ನಡೆಸಬಾರದು. ಹೀಗಾಗಿ ಇಂದು ಸಂಜೆಯಿಂದ ವಿಮಾನಗಳ ಹಾರಾಟವನ್ನು ಬಂದ್ ಮಾಡಲಾಗಿದೆ. ವರ್ಷದಲ್ಲಿ 2 ಬಾರಿ ದೇವರ ಮೆರವಣಿಗೆ ನಡೆಯುತ್ತದೆ. ಪ್ರತಿ ಬಾರಿಯೂ ವಿಮಾನಗಳ ಹಾರಾಟವನ್ನು ನಿಷೇಧಿಸಲಾಗುತ್ತದೆ.
ಇಲ್ಲಿನ ಪದ್ಮನಾಭಸ್ವಾಮಿ ದೇವಾಲಯದ ಅಲ್ಪಸ್ಸಿ ಉತ್ಸವಕ್ಕೆ ಐತಿಹಾಸಿಕ ಸಂಪ್ರದಾಯದ ನಂಟಿದೆ. ಪಾರಂಪರಿಕವಾಗಿ ಈ ಉತ್ಸವವು ಇಂದಿಗೂ ನಡೆದುಕೊಂಡು ಬಂದಿದೆ. ದೇವರ ಉತ್ಸವ ಮೂರ್ತಿಗಳ ಸ್ನಾನಕ್ಕಾಗಿ ಏರ್ಪೋರ್ಟ್ ರಸ್ತೆ ಮೂಲಕ ಶಂಘುಮುಘಂ ಬೀಚ್ ತಲುಪಲಿದೆ. ಈ ಅದ್ದೂರಿ ಉತ್ಸವದ ಯಾತ್ರೆಯಲ್ಲಿ ಸಾವಿರಾರು ಭಕ್ತರು ಸೇರುತ್ತಾರೆ.
ಇದನ್ನ ಓದಿ: ಬಿಜೆಪಿಗೆ ಮತ ಹಾಕುವ ಮೂಲಕ ಸಿದ್ದರಾಮಯ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಿ: ಜಗದೀಶ್ ಶೆಟ್ಟರ್
ಈ ಸಂಬಂಧ ಇಲ್ಲಿನ ವಿಮಾನ ನಿಲ್ದಾಣದ ಸಿಬ್ಬಂದಿ ಮೊದಲೇ ಗೈಡ್ಲೈನ್ಸ್ ನೀಡಿದ್ದರು. ಅದರಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳು ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಈ ಅವಧಿಯಲ್ಲಿ ವಿಮಾನಗಳ ಹಾರಾಟ ಮಾಡುವುದಿಲ್ಲ. ಯಾತ್ರೆ ಮುಗಿಯುವ ತನಕ ವಿಮಾನ ನಿಲ್ದಾಣದ ರನ್ವೇ ಕ್ಲೋಸ್ ಆಗಿರುತ್ತದೆ. 1932ರಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಗಿದೆ. ಅಂದಿನಿಂದಲೂ ವಿಮಾನ ಸಂಚಾರವನ್ನು ಬಂದ್ ಮಾಡಿಕೊಂಡೇ, ದೇವರ ಉತ್ಸವ ನಡೆಯುತ್ತ ಬಂದಿದೆ.