ಕ್ರೈಸ್ತ ಧರ್ಮದ ಪರಮೋಚ್ಛ ನಾಯಕ ನಿಧನ

Untitled design 2025 04 21t153554.056

ವ್ಯಾಟಿಕನ್ ಸಿಟಿ: ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕ್ರೈಸ್ತ ಧರ್ಮದ ಪರಮೋಚ್ಚ ನಾಯಕ ಮತ್ತು ರೋಮನ್ ಕ್ಯಾಥೋಲಿಕ್ ಚರ್ಚ್‌ನ ಪೋಪ್ ಫ್ರಾನ್ಸಿಸ್ ಅವರು ಇಂದು (ಏಪ್ರಿಲ್ 21, 2025, ಸೋಮವಾರ) ನಿಧನರಾಗಿದ್ದಾರೆ. ಅವರು 88 ವರ್ಷದ ವಯಸ್ಸಿನಲ್ಲಿ ವ್ಯಾಟಿಕನ್‌ನ ಕಾಸಾ ಸಾಂತಾ ಮಾರ್ಟಾದಲ್ಲಿರುವ ತಮ್ಮ ನಿವಾಸದಲ್ಲಿ ತಮ್ಮ ಕೊನೆಯುಸಿರೆಳೆದಿದ್ದಾರೆ.

ವ್ಯಾಟಿಕನ್ ನ್ಯೂಸ್ ಸಂಸ್ಥೆ ಈ ದುಃಖದ ಸುದ್ದಿಯನ್ನು ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಘೋಷಿಸಿದ್ದು, ಈಸ್ಟರ್ ಸೋಮವಾರದ ದಿನ ಪೋಪ್ ನಿಧನರಾಗಿದ್ದಾರೆ ಎಂಬುದನ್ನು ದೃಢಪಡಿಸಿದೆ. ಪೋಪ್ ಅವರ ನಿಧನದ ಸುದ್ದಿಯನ್ನು ವ್ಯಾಟಿಕನ್‌ನ ಕ್ಯಾಮೆರ್ಲೆಂಗೊ ಕಾರ್ಡಿನಲ್ ಕೆವಿನ್ ಫಾರೆಲ್ ಅಧಿಕೃತವಾಗಿ ಘೋಷಿಸಿದರು.

ADVERTISEMENT
ADVERTISEMENT

ಪೋಪ್ ಫ್ರಾನ್ಸಿಸ್ ಎಂಬ ಹೆಸರು ಕೇವಲ ಒಂದು ಧಾರ್ಮಿಕ ಸ್ಥಾನವನ್ನು ಸೂಚಿಸುವುದಲ್ಲ, ಅದು ಕರುಣೆ, ಆತ್ಮೀಯತೆ, ಬಡವರ ಸೇವೆ ಮತ್ತು ಮಾನವೀಯ ಮೌಲ್ಯಗಳ ಸಂಕೇತವಾಗಿದೆ. 2013ರಲ್ಲಿ ಪೋಪ್ ಆಗಿ ಆಯ್ಕೆಯಾದ ಜಾರ್ಜ್ ಮಾರಿಯೊ ಬರ್ಗೊಗ್ಲಿಯೋ ಅವರು, ದಕ್ಷಿಣ ಅಮೆರಿಕದ ಅರ್ಜೆಂಟೀನಾದಿಂದ ಬಂದ ಮೊದಲ ಪೋಪ್ ಆಗಿದ್ದರು. ಕಠಿಣ ಧಾರ್ಮಿಕ ನಿಬಂಧನೆಗಳ ನಡುವೆಯೂ, ಮಾನವೀಯತೆಗೆ ಆದ್ಯತೆ ನೀಡುವ ಅವರ ನಿಲುವು ಅವರನ್ನು ಜಗತ್ತಿನಾದ್ಯಂತ ಜನಪ್ರಿಯ ವ್ಯಕ್ತಿಯಾಗಿಸಿತು.

ಪೋಪ್ ಅವರು ತಮ್ಮ ಬಡವರು, ಅಸಹಾಯರು, ಶರಣಾರ್ಥಿಗಳು ಮತ್ತು ಹಿಂಸೆ ಎದುರಿಸುತ್ತಿರುವ ಜನರ ಪರವಾಗಿ ಸದಾ ಧ್ವನಿ ಎತ್ತಿದವರು. ಪರಿಸರ ಸಂರಕ್ಷಣೆಯ ಅಗತ್ಯತೆ, ಆರ್ಥಿಕ ಅಸಮಾನತೆ, ಧಾರ್ಮಿಕ ಸೌಹಾರ್ದತೆ – ಇವನ್ನೆಲ್ಲಾ ಅವರು ತಮ್ಮ ಸಂದೇಶಗಳಲ್ಲಿ ಪ್ರಧಾನವಾಗಿಟ್ಟು ವಿಶ್ವದಾದ್ಯಂತ ಜನರ ಗಮನ ಸೆಳೆದರು.

ಪೋಪ್ ಫ್ರಾನ್ಸಿಸ್ ನಿಧನದ ಸುದ್ದಿಗೆ ಪ್ರತಿಕ್ರಿಯೆ ನೀಡಿದ ಭಾರತದ ಪ್ರಧಾನಿ ನರೆಂದ್ರ ಮೋದಿಯವರು ತಮ್ಮ ಸಂತಾಪ ಸೂಚಿಸಿದ್ದಾರೆ. “ಪವಿತ್ರ ಪೋಪ್ ಫ್ರಾನ್ಸಿಸ್ ಅವರ ನಿಧನದಿಂದ ತೀವ್ರ ನೋವಾಗಿದೆ. ಈ ದುಃಖದ ಸಮಯದಲ್ಲಿ ಜಾಗತಿಕ ಕ್ಯಾಥೋಲಿಕ್ ಸಮುದಾಯಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಪೋಪ್ ಫ್ರಾನ್ಸಿಸ್ ಅವರು ಕರುಣೆ, ನಮ್ರತೆ ಮತ್ತು ಆಧ್ಯಾತ್ಮಿಕ ಧೈರ್ಯದ ದೀಪಸ್ತಂಭರಾಗಿದ್ದರು. ಅವರು ಬಡವರು ಮತ್ತು ದೀನದಲಿತರ ಸೇವೆಯಲ್ಲಿ ತಮ್ಮನ್ನು ತಾವು ಅರ್ಪಿಸಿಕೊಂಡರು. ಬಳಲುತ್ತಿರುವವರಿಗೆ ಅವರು ನಿರಂತರವಾಗಿ ಭರವಸೆಯ ಬೆಳಕು ತುಂಬಿದರು. ಅವರೊಂದಿಗೆ ನನ್ನ ಭೇಟಿಗಳನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ.” ಎಂದು ಪ್ರಧಾನಿ ಮೋದಿ ಸಂತಾಪ ಸೂಚಿಸಿದ್ದಾರೆ.

ಅವರ ವಿಧೇಯತೆಯ ಜೀವನ ಶೈಲಿ, ಸರಳತೆ ಮತ್ತು ನಿಷ್ಠೆ ಏಕರೂಪವಾಗಿ ವಿಶ್ವದ ಜನತೆಯ ಮನಸ್ಸನ್ನು ಗೆದ್ದಿತ್ತು. ಕ್ರೈಸ್ತ ಧರ್ಮದ ಮೂಲ ಮೌಲ್ಯಗಳಾದ ಪ್ರೀತಿ, ಶಾಂತಿ, ಕ್ಷಮೆ ಮತ್ತು ಸಮಾನತೆಯನ್ನು ತಮ್ಮ ಜೀವನದಲ್ಲಿ ಅನುಸರಿಸುತ್ತಿದ್ದರು.

 

Exit mobile version