ಈಶ್ವರ ಉವಾಚ
ಶ್ರೀ ರಾಮ ರಾಮೇತಿ ರಮೇ ರಾಮೇ ಮನೋರಮೇ
ಸಹಸ್ರನಾಮ ತಥುಲ್ಯಂ ರಾಮ ನಾಮ ವರಾನನೇ ॥
ಐರ್ಲೆಂಡ್‌ನಲ್ಲಿ ಮೊದಲ ಬಾರಿಗೆ “ಐರ್ಲೆಂಡ್ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ” (IE SRS Brundavana) ಸಂಘಟನೆಯಿಂದ ಆಯೋಜಿತವಾದ ಶ್ರೀ ರಾಮನವಮಿಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಲಿಮೆರಿಕ್ (Limerick) ನಗರದ ಅಹನೆ ಜಿ ಎ ಎ (Ahane GAA Club) ಸಮುದಾಯ ಭವನದಲ್ಲಿ ನಡೆದ ಈ ಪವಿತ್ರ ಉತ್ಸವದಲ್ಲಿ ನೂರಾರು ಭಕ್ತರು ಭಾಗವಹಿಸಿ, ಶ್ರೀ ರಾಮನ ಮೇಲಿನ ತಮ್ಮ ಭಕ್ತಿ, ಶ್ರದ್ಧೆ ಮತ್ತು ಭಾವನಾತ್ಮಕ ನಂಬಿಕೆಯನ್ನು ವ್ಯಕ್ತಪಡಿಸಿದರು.
IE SRS Brundavana ವತಿಯಿಂದ ಮೋಹನ್‌ಕುಮಾರ್ ಕೃಷ್ಣಪ್ಪ, ಮಹೇಶ್ ದೇಶಪಾಂಡೆ, ಸಚಿನ್ ಕಡಾಡಿ, ಕೃಷ್ಣಮೂರ್ತಿ, ರಮ್ಯಾ ದ್ವಾರಕಾನಾಥ್, ಪವನ್ ಗುರುರಾಜ್ ರಾವ್ ಮತ್ತು ಐರ್ಲೆಂಡ್‌ನ ಸನಾತನ ಧರ್ಮಾನುಯಾಯಿಗಳು, ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಮತ್ತು ಶ್ರೀ ರಾಮನ ಭಕ್ತರು ಸೇರಿ ಈ ಕಾರ್ಯಕ್ರಮವನ್ನು ಭಕ್ತಿಭಾವದಿಂದ ನಡೆಸಿದರು.
ಶ್ರೀ ರಾಮನವಮಿಯ ಹಿಂದಿನ ದಿನ, IE SRS Brundavanaದ ಮಹಿಳಾ ಸದಸ್ಯರಾದ ಶ್ರೀಮತಿ ಪ್ರಿಯಾಂಕ, ಶ್ರೀಮತಿ ಸವಿತಾ, ಶ್ರೀಮತಿ ಅನು, ಶ್ರೀಮತಿ ಅರ್ಚನಾ, ಶ್ರೀಮತಿ ರಮ್ಯಾ, ಶ್ರೀಮತಿ ಚಂದನ, ಶ್ರೀಮತಿ ಶಾಲಿನಿ, ಶ್ರೀಮತಿ ಶ್ರೀವಿದ್ಯಾ, ಶ್ರೀಮತಿ ಪ್ರವೀಣಾ ಮತ್ತಿತರರು ಒಟ್ಟಾಗಿ ಸಮುದಾಯ ಭವನವನ್ನು ಸ್ವಚ್ಛಗೊಳಿಸಿದರು. ಹೂವಿನ ಹಾರ, ತರಕಾರಿ ಹೆಚ್ಚುವಿಕೆ, ಮುಂದಿನ ದಿನದ ಆಚರಣೆಗೆ ಬೇಕಾದ ಸಿದ್ಧತೆಗಳನ್ನು ಹಾಸ್ಯ ಮತ್ತು ಸಹಕಾರದಿಂದ ಪೂರ್ಣಗೊಳಿಸಿದರು.
ಶ್ರೀ ರಾಮನವಮಿ ಆಚರಣೆ
ಶ್ರೀ ರಾಮನವಮಿ ದಿನದಂದು ಶ್ರೀ ರಾಮ, ಮಾತೆ ಸೀತೆ, ಲಕ್ಷ್ಮಣ ಮತ್ತು ಹನುಮಂತರಿಗೆ ವಿಶೇಷ ಪೂಜೆ ನಡೆಯಿತು. ಶ್ರೀ ಕೃಷ್ಣಮೂರ್ತಿ ಮತ್ತು ಶ್ರೀ ಸಂದೀಪ್ ಪುರೋಹಿತರ ನೇತೃತ್ವದಲ್ಲಿ ಸಂಕಲ್ಪ, ಪಂಚಾಮೃತ ಸೇವೆ, ಅಲಂಕಾರ ಸೇವೆ, ವೇದ ಸೂಕ್ತ ಪಠಣ, ವಿಷ್ಣು ಸಹಸ್ರನಾಮ ಪಾರಾಯಣ, ಅನ್ನದಾನ, ಪ್ರಸಾದ ವಿತರಣೆ ಸೇರಿದಂತೆ ಹಲವು ಸೇವಾಕಾರ್ಯಗಳು ಮಂಗಳಕರವಾಗಿ ನೆರವೇರಿದವು.
ಮಕ್ಕಳ ರಾಮಲೀಲಾ
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ, ಡಬ್ಲಿನ್‌ನ 4 ರಿಂದ 11 ವರ್ಷದ ಮಕ್ಕಳು ರಾಮಾಯಣದ ಪ್ರಸಂಗಗಳನ್ನು ನಾಟಕ ರೂಪದಲ್ಲಿ ಪ್ರದರ್ಶಿಸಿದರು. ರಾಮನ ಜನ್ಮ, ಸೀತಾ ಸ್ವಯಂವರ, ಕೈಕೇಯಿಯ ಎರಡು ವರಗಳು, ರಾಮನ ವನವಾಸ, ಭರತನ ಪಟ್ಟಾಭಿಷೇಕ, ಶೂರ್ಪಣಖಿಯ ಪ್ರಸಂಗ, ಸೀತಾಪಹರಣ, ಹನುಮಂತ ಮತ್ತು ಸುಗ್ರೀವ ಭೇಟಿ, ಲಂಕಾ ಪ್ರವೇಶ, ಅಶೋಕವನದಲ್ಲಿ ಸೀತೆಗೆ ರಾಮನ ಉಂಗುರ ಕೊಡುವ ಸನ್ನಿವೇಶ, ಲಂಕಾದಹನ, ರಾಮಸೇತು ನಿರ್ಮಾಣ, ರಾಮ-ರಾವಣ ಯುದ್ಧ, ರಾವಣ ವಧೆ ಮತ್ತು ಶ್ರೀ ರಾಮನ ಪಟ್ಟಾಭಿಷೇಕದ ದೃಶ್ಯಗಳನ್ನು ಮನಮೋಹಕವಾಗಿ ನಟಿಸಿದರು. ಮಕ್ಕಳ ವೇಷಭೂಷಣ, ರಾವಣನ ದಶಮುಖ, ರಾಮನ ಬಿಲ್ಲು ಮತ್ತು ಹನುಮಂತನ ಪಾತ್ರದ ಚಿಕ್ಕ ಹನುಮನ ತುಂಟಾಟಗಳು ಭಕ್ತರನ್ನು ರಂಜಿಸಿದವು. ರಾಮಾಯಣದ ಪಾವಿತ್ರ್ಯತೆಯನ್ನು ಕಾಪಾಡುತ್ತಾ ಮಕ್ಕಳು ಪ್ರದರ್ಶನ ನೀಡಿದ್ದು ಗಮನಾರ್ಹವಾಗಿತ್ತು.
ಪ್ರಸಾದವಿಲ್ಲದ ಶ್ರೀ ರಾಮನವಮಿ ಸಾಧ್ಯವೇ? ಬಾಲ್ಯದಲ್ಲಿ ಸ್ನೇಹಿತರೊಂದಿಗೆ ಪಾನಕ ಮತ್ತು ಕೋಸಂಬರಿ ಸ್ವೀಕರಿಸಿದ ನೆನಪುಗಳನ್ನು ಈ ಕಾರ್ಯಕ್ರಮವು ಮರುಕಳಿಸಿತು. ಶ್ರೀ ಸಾಗರ್ ಕುಲಕರ್ಣಿ, ನಿತೀಶ್ ರಣ್ಯ, ಸಚಿನ್ ಕಡಾಡಿ ಮತ್ತು ಮಹೇಶ್ ದೇಶಪಾಂಡೆಯವರ ನೇತೃತ್ವದಲ್ಲಿ ಎಲೆ ಊಟ, ಹಯಗ್ರೀವ, ಕೋಸಂಬರಿ, ಪಲ್ಯ, ಚಿತ್ರಾನ್ನ, ಸಾರು, ಕೂಟು, ಮೊಸರನ್ನ ಸೇರಿದಂತೆ ಸಾಂಪ್ರದಾಯಿಕ ಅಡುಗೆಯನ್ನು ರುಚಿಕರವಾಗಿ ತಯಾರಿಸಲಾಯಿತು. ಈ ಊಟವು ಭಾರತೀಯ ಸಂಸ್ಕೃತಿಯ ಗೌರವವನ್ನು ದೂರದೇಶದಲ್ಲೂ ಉಳಿಸಿತು.
ಸಾಂಸ್ಕೃತಿಕ ಮಹತ್ವ
ರಾಮನುಂ ಭರತನುಂ ತಬ್ಬಿಕೊಂಡತ್ತಂದು।
ಪ್ರೇಮಾಶ್ರುವುಕ್ಕಿ ನದಿಯಾಗಿ ಪರಿದಂದು॥
ಸೀಮೆಯಂ ಮುಟ್ಟಿತಲ ಬಾಂಧವ್ಯಸೌಂದರ್ಯ।
ಕ್ಷೇಮವದು ಜೀವಕ್ಕೆ – ಮಂಕುತಿಮ್ಮ॥
ರಾಮ ಮತ್ತು ಭರತರ ಪ್ರೇಮಾಶ್ರು ಭಾವ ಸೌಂದರ್ಯದ ಗರಿಮೆಯನ್ನು ತಲುಪಿದಂತೆ, ಈ ಕಾರ್ಯಕ್ರಮವು ಭಾರತೀಯ ಸಂಸ್ಕೃತಿಯನ್ನು ವಿದೇಶದಲ್ಲೂ ಬಲಪಡಿಸಿತು. IE SRS Brundavana ಸಂಘಟನೆಯು ಧಾರ್ಮಿಕ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಐರ್ಲೆಂಡ್‌ನ ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಸಂಪರ್ಕ ಕೇಂದ್ರವಾಗಿದೆ.