ಸಿಲಿಕಾನ್ ಸಿಟಿ ಬೆಂಗಳೂರಿಗೆ ಕಂಟಕದ ಸರಮಾಲೆಯೇ ವಕ್ಕರಿಸಿಕೊಳ್ತಿದೆ. ಒಂದು ಕಡೆ ಕಾಲಾರ ಭೀತಿ ಮೂಡಿಸಿದ್ರೆ, ಮತ್ತೊಂದೆಡೆ ಗ್ಲಾಂಡರ್ಸ್ ಗಂಡಾಂತರ ಆತಂಕ ಸೃಷ್ಟಿಸಿದ್ದಾರೆ. ಬೆಂಗಳೂರಿನ ಕುದುರೆಯೊಂದರಲ್ಲಿ ಗ್ಲಾಂಡರ್ಸ್ ಎನ್ನುವ ರೋಗ ಪತ್ತೆಯಾಗಿದೆ. ಡಿ.ಜೆ ಹಳ್ಳಿಯ ಕುದುರೆಯೊಂದರಲ್ಲಿ ಮಾರಕ ಗ್ಲಾಂಡರ್ಸ್ ರೋಗ ದೃಢಪಟ್ಟಿದ್ದು, ಆ ಪ್ರದೇಶದ ಸುತ್ತಮುತ್ತ `ರೋಗಪೀಡಿತ ವಲಯ’ ಎಂದು ಪಶುಸಂಗೋಪನೆ ಹಾಗೂ ಹೈನುಗಾರಿಕೆ ಇಲಾಖೆ ಘೋಷಿಸಿದೆ. ಬೆಂಗಳೂರು ಉತ್ತರ ತಾಲೂಕಿನ ಡಿ.ಜೆ.ಹಳ್ಳಿಯ ಖಲೀದ್ ಷರೀಫ್ ಎನ್ನುವವರ ಕುದುರೆಯಲ್ಲಿ ಈ ರೋಗ ಕಂಡುಬಂದಿದ್ದು, ಡಿ.ಜೆ.ಹಳ್ಳಿ ಕೇಂದ್ರ ಸ್ಥಾನದಿಂದ ಸುತ್ತಮುತ್ತಲಿನ 5 ಕಿಮೀ. ವ್ಯಾಪ್ತಿಯನ್ನ “ರೋಗ ಪೀಡಿತ ವಲಯ”ಎಂದು ಘೋಷಣೆ ಮಾಡಲಾಗಿದೆ.
5 ರಿಂದ 25 ಕಿಮೀ. ಪ್ರದೇಶವನ್ನು “ಜಾಗೃತ ವಲಯ”ಎಂದು ಘೋಷಿಸಲಾಗಿದೆ. ಗ್ಲಾಂಡರ್ಸ್ ಸೋಂಕು ಒಂದು ಸಾಂಕ್ರಾಮಿಕ ಮತ್ತು ಮಾರಣಾಂತಿಕ ಕಾಯಿಲೆ. ಇದು ಸಾಮಾನ್ಯವಾಗಿ ಕುದುರೆಗಳು, ಕತ್ತೆಗಳು ಮತ್ತು ಹೇಸರಗತ್ತೆಗಳಲ್ಲಿ ಕಂಡುಬರುತ್ತೆ.ಇದು ಬರ್ಖೋಲ್ಡೆರಿಯಾ ಮಲ್ಲಿ ಎಂಬ ಬ್ಯಾಕ್ಟೀರಿಯಂದಿಂದ ಉಂಟಾಗುತ್ತದೆ.ಶ್ವಾಸನಾಳ ಮತ್ತು ಶ್ವಾಸಕೋಶಗಳಲ್ಲಿ ಗಂಟುಗಳು ಮತ್ತು ಹುಣ್ಣು ಉಂಟಾಗಿ ಜೀವಕ್ಕೆ ಕುತ್ತು ತರೋ ಕಾಯಿಲೆ ಆಗಿದೆ. ಇದನ್ನು ಫಾರ್ಸಿ ಎಂದು ಕರೆಯಲಾಗುತ್ತದೆ. ಇದು ಉಲ್ಬಣವಾದರೆ ಸಾವು ಸಂಭವಿಸುವ ಸಾಧ್ಯತೆಗಳು ಹೆಚ್ಚಾಗಿದೆ.ಸಾಮಾನ್ಯವಾಗಿ ಸೋಂಕು ಪೀಡಿತ ಪ್ರಾಣಿಯ ಸಂಪರ್ಕಕ್ಕೆ ಬರುವ ಪ್ರಾಣಿ ನಿರ್ವಾಹಕರು ಅಥವಾ ಇತರರು ಸೋಂಕಿಗೆ ತುತ್ತಾಗುವ ಅಪಾಯವಿದೆ ಎಂದು ವೈದ್ಯರು ಹೇಳಿದ್ದಾರೆ.