ಸೆಪ್ಟೆಂಬರ್ ಮತ್ತು ಅಕ್ಟೋಬರ್ನಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿತ್ತು. ” ನಂತರ ಎರಡು ವಾರ ಸತತವಾಗಿ ಇಳಿಕೆಯ ಹಾದಿಯಲ್ಲಿತ್ತು. ಕಳೆದ ಎರಡು ದಿನಗಳಿಂದ ಮತ್ತೆ ಏರುಗತಿಯಲ್ಲಿದೆ. ಅಮೆರಿಕದ ಬಹುರಾಷ್ಟ್ರೀಯ ಹೂಡಿಕೆ ಬ್ಯಾಂಕ್ ಮತ್ತು ಹಣಕಾಸು ಸೇವಾ ಸಂಸ್ಥೆಯಾದ ಗೋಲ್ಡ್ಮನ್ ಸ್ಯಾಟ್ಸ್ ಗ್ರೂಪ್ ಅಂದಾಜಿನ ಪ್ರಕಾರ ಚಿನ್ನದ ಬೆಲೆ ಮುಂದಿನ ವರ್ಷ ಸಿಕ್ಕಾಪಟ್ಟೆ ಏರಲಿದೆ. ಹೊಸ ದಾಖಲೆ ಬೆಲೆಯನ್ನು ಚಿನ್ನ ಗಳಿಸುವ ಸಾಧ್ಯತೆ ಇದೆ.ಮುಂದಿನ ವರ್ಷಾಂತ್ಯದೊಳಗೆ, ಅಂದರೆ 2025ರ ಡಿಸೆಂಬರ್ ನೊಳಗೆ ಚಿನ್ನದ ಬೆಲೆ ಒಂದು ಔನ್ಸ್ಗೆ 3,000 ಡಾಲರ್ ಆಗಬಹುದು . ಇಲ್ಲಿ ಒಂದು ಔನ್ಸ್ ಎಂದರೆ 28.35 ಗ್ರಾಂ. ಒಂದು ಗ್ರಾಂ ಚಿನ್ನಕ್ಕೆ 105.82 ಡಾಲರ್. ಸುಮಾರು 8,877 ರೂ. ಭಾರತದಲ್ಲಿ ಇದರ ಬೆಲೆ 9,000 ರೂ ದಾಟಬಹುದು. ಜಾಗತಿಕವಾಗಿ ಚಿನ್ನದ ಬೆಲೆ ಏರಿಕೆ ಆಗಲು ಹಲವು ಕಾರಣಗಳಿರಬಹುದು. ಅದರಲ್ಲಿ ಪ್ರಮುಖವಾದುವು ಸೆಂಟ್ರಲ್ ಬ್ಯಾಂಕುಗಳಿಂದ ಚಿನ್ನದ ಖರೀದಿ ಮತ್ತು ಬಡ್ಡಿದರ ಕಡಿತ ಸಾಧ್ಯತೆ ಎನ್ನಲಾಗಿದೆ.
ಆರ್ಬಿಐ ಸೇರಿದಂತೆ ಜಗತ್ತಿನ ಹಲವು ದೇಶಗಳ ಸೆಂಟ್ರಲ್ ಬ್ಯಾಂಕುಗಳು ಚಿನ್ನದ ಖರೀದಿಯ ಭರಾಟೆಯಲ್ಲಿವೆ. ಅನಿಶ್ಚಿತ ಸಂದರ್ಭಗಳಿಗೆ ಚಿನ್ನವನ್ನು ಶೇಖರಿಸಿಡುವ ಪರಿಪಾಠ ಇರುವುದರಿಂದ ಇದು ನಿರೀಕ್ಷಿತ. ಹಾಗೆಯೇ, ಮುಂಬರುವ ಕೆಲ ತಿಂಗಳುಗಳಲ್ಲಿ ಅಮೆರಿಕದ ಫೆಡರಲ್ ರಿಸರ್ವ್ ಸಂಸ್ಥೆ ಬಡ್ಡಿದರಗಳನ್ನು ಕಡಿಮೆ ಮಾಡುವ ಸಾಧ್ಯತೆ ದಟ್ಟವಾಗಿದೆ. ಇದು ಚಿನ್ನಕ್ಕೆ ಬೇಡಿಕೆ ಇನ್ನಷ್ಟು ಹೆಚ್ಚಿಸಲಿದೆ. ಭಾರತದಲ್ಲಿ ಜಾಗತಿಕ ಬೆಲೆಗಳ ಜತೆಗೆ ಸ್ಥಳೀಯವಾಗಿ ಆಭರಣಗಳಿಗೆ ಬೇಡಿಕೆ ಹೆಚ್ಚುತ್ತಿರುವುದೂ ಕೂಡ ಚಿನ್ನದ ಬೆಲೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ, ಚಿನ್ನದ ಬೆಲೆ ಮುಂದಿನ ವರ್ಷಾಂತ್ಯದಲ್ಲಿ ಭಾರತದಲ್ಲಿ 9,500 ರೂ ಗಡಿ ದಾಟಿದರೂ ಅಚ್ಚರಿ ಇಲ್ಲ
ಚಿನ್ನದ ಬೆಲೆ ಇಳಿಕೆ
ಹೊಸದಿಲ್ಲಿ: ದಿಲ್ಲಿಯಲ್ಲಿ ಬುಧವಾರ ಚಿನ್ನದ ಬೆಲೆ 150 ರೂ. ಇಳಿಕೆಯಾಗಿ 10 ಗ್ರಾಂಗೆ 77,900 ರೂ. ಇತ್ತು ಮಂಗಳವಾರ ಶುದ್ಧ ಚಿನ್ನದ ಬೆಲೆ 10 ಗ್ರಾಂಗೆ 78,050ರೂ. ಇತ್ತು .ಬೆಳ್ಳಿ ಬೆಲೆ ಕೆ.ಜಿಗೆ. 500 ರೂ. ಇಳಿದು, 93 ಸಾವಿರದಲ್ಲಿ ಸ್ಥಿರಗೊಂಡಿತ್ತು. ಆಭರಣ ಚಿನ್ನದ ಬೆಲೆ 150 ರೂ ಇಳಿದು, 77, 500 ರೂ. ಆಗಿದೆ. ಮಂಗಳವಾರ ಇದರ ಬೆಲೆ 77650 ರೂ. ಇತ್ತು.
ಏರಿಕೆ-ಇಳಿಕೆ ಟ್ರೆಂಡ್
ಡಾಲರ್ ಮೌಲ್ಯ ಹೆಚ್ಚುತ್ತಿದೆ. ವಾಲ್ ಸ್ಟ್ರೀಟ್ ಷೇರುಪೇಟೆ ಜಿಗಿತದ ಹಾದಿಯಲ್ಲಿದೆ. ಚಿನ್ನ ದುಬಾರಿ ಹೂಡಿಕೆ ಎಂದೆನಿಸಿದೆ. ಹೀಗಾಗಿ ಹೂಡಿಕೆದಾರರ ಒಲವು ಬದಲಾಗಿದೆ. ಅವರು ಬಂಗಾರ ಬಿಟ್ಟು ಅನ್ಯ ವಲಯಗಳತ್ತ ತೆರಳುತ್ತಿದ್ದಾರೆ. ಭಾರತದಲ್ಲಿ ಮಾತ್ರ ಷೇರುಪೇಟೆಯಲ್ಲಿ ಕರಡಿ ಆರ್ಭಟ ಹೆಚ್ಚಿದೆ. ಹೀಗಾಗಿ ಚಿನ್ನದ ಸುರಕ್ಷಿತ ಎಂದೆನಿಸತೊಡಗಿದೆ. ಅಮೆರಿಕದ ಆರ್ಥಿಕ ಪರಿಸ್ಥಿತಿ ಅನಿಶ್ಚಿತವಾದಾಗ ಅಲ್ಲಿ ಕೂಡ ಚಿನ್ನದ ಬೆಲೆ ಏರಿಕೆಯಾಗುತ್ತದೆ. ಇಂಥ ಸನ್ನಿವೇಶದಲ್ಲಿ ಹಳದಿ ಲೋಹದ ಬೆಲೆ ಶೇ. 20ರಷ್ಟು ಹೆಚ್ಚಬಹುದು ಗೋಲ್ಡ್ಮನ್ ವಿಶ್ಲೇಷಕರು ಹೇಳಿದ್ದಾರೆ.