ನಮ್ಮಮನೆಯ ಹಿತ್ತಲಲ್ಲೇ ಸಿಗುವ ಗಿಡಗಳು ಅನೇಕ ಖಾಯಿಲೆಗಳನ್ನು ಶಮನ ಮಾಡುವ ಶಕ್ತಿ ಹೊಂದಿರುತ್ತವೆ. ಹಿಂದಿನ ಕಾಲದ ಜನರು ಆಯುರ್ವೇದ ಔಷಧಗಳನ್ನು ಇಂತಹ ಗಿಡ ಗಂಟಿ, ಬೇರುಗಳಿಂದಲೇ ತಯಾರಿಸುತ್ತಿದ್ದರು. ಅಂತಹ ಒಂದು ಗಿಡಗಳಲ್ಲಿ ದೊಡ್ಡಪತ್ರೆಯೂ ಒಂದು. ದಕ್ಷಿಣಭಾರತದಲ್ಲಿ ಸಾಮಾನ್ಯವಾಗಿ ಇದನ್ನು ಜ್ವರ, ಶೀತ, ಕೆಮ್ಮುಗಳಿಗೆ ಮನೆಮದ್ದಾಗಿ ಬಳಸಲಾಗುತ್ತದೆ. ಗಾಯ ಅಥವಾ ಚೇಳು ಕಡಿತವಾದಾಗ ಪ್ರಥಮ ಚಿಕಿತ್ಸೆಯಾಗಿ ಇದರ ಎಲೆಗಳನ್ನು ಜಜ್ಜಿ ಬಳಸಲಾಗುತ್ತದೆ. ದಕ್ಷಿಣ ಕರ್ನಾಟಕದಲ್ಲಿ ದೊಡ್ಡಪತ್ರೆಯ ಚಟ್ಟಿ, ತಂಬುಳಿ ಮಾಡಲಾಗುತ್ತದೆ.
ದೊಡ್ಡಪತ್ರೆ ಎಲೆಯನ್ನು ಉಪ್ಪಿನ ಸಹಿತ ತಿಂದರೆ ಜೀರ್ಣಶಕ್ತಿ ಅಧಿಕವಾಗುತ್ತದೆ. ದೊಡ್ಡ ಪತ್ರೆ ಎಲೆಯನ್ನು ಹುಳುಕಡ್ಡಿಯ ಭಾಗಕ್ಕೆ ತಿಕ್ಕುತ್ತಿದ್ದರೆ ಹುಳುಕಡ್ಡಿಯ ನಿವಾರಣೆಯಾಗುತ್ತದೆ. ದೊಡ್ಡ ಪತ್ರೆಯಲ್ಲಿ ವಿಟಮಿನ್ ಸಿ, ಫೈಬರ್ ಮತ್ತು ಕ್ಯಾಲ್ಸಿಯಂ ಗುಣ ಹೇರಳವಾಗಿದೆ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸಲು ಸಹಾಯ ಮಾಡುತ್ತದೆ. ದೊಡ್ಡ ಪತ್ರೆಯ ಗಿಡದ ಎಲೆಯನ್ನು ತಂದು ಬಾಡಿಸಿ ರಸ ತೆಗೆದು ಜೇನುತುಪ್ಪ ಸೇರಿಸಿ ಕುಡಿದರೆ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಅರಿಸಿನ ಕಾಮಾಲೆ ಇದ್ದವರಿಗೂ ದೊಡ್ಡ ಪತ್ರೆ ಸೊಪ್ಪು ಉತ್ತಮ ಮನೆ ಮದ್ದಾಗಿದೆ.
ದೊಡ್ಡ ಪತ್ರೆ ಎಲೆಯ ರಸಕ್ಕೆ ಬೆಲ್ಲ ಸೇರಿಸಿ ಕುಡಿದಾಗ ಬೆಲ್ಲ ಕೂಡ ದೇಹಕ್ಕೆ ಒಳ್ಳೆಯ ಪದಾರ್ಥವಾಗಿದೆ. ಇದು ದೇಹದಿಂದ ವಿಷಯುಕ್ತ ಪದಾರ್ಥವನ್ನು ಹೊರಹಾಕಲು ನೆರವಾಗುತ್ತದೆ. ಆದ್ದರಿಂದ ನಿಮ್ಮ ಮನೆಯ ಹಿತ್ತಲಿನಲ್ಲಿ ದೊಡ್ಡ ಪತ್ರೆ ಸೊಪ್ಪಿದ್ದರೆ ಜೋಪಾನ ಮಾಡಿ ಉಳಿಸಿಕೊಳ್ಳಿ.