- ರೇಣುಕಾಸ್ವಾಮಿ ಎಲೆಕ್ಟ್ರಿಕ್ ಶಾಕ್ ಕೊಟ್ಟು ಚಿತ್ರಹಿಂಸೆ
- ರೇಣುಕಾಸ್ವಾಮಿ ಮೈ ಮೇಲಿದ್ದ ಚಿನ್ನಾಭರಣ ದೋಚಿದ ಕದೀಮರು
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದಿನಗಳು ಕಳೆದಂತೆ ಒಂದೊಂದೆ ರೋಚಕ ಘಟನೆಗಳು ಹೊರಬರುತ್ತಿವೆ. ನಿನ್ನೆ ದರ್ಶನ್ ಮತ್ತು ಅವರ ಗ್ಯಾಂಗ್ ಅನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾಗ ವಾದ ಮಂಡಿಸಿದ್ದ ವಿಶೇಷ ಅಭಿಯೋಜಕರು, ರೇಣುಕಾಸ್ವಾಮಿ ಎಲೆಕ್ಟ್ರಿಕ್ ಶಾಕ್ ಕೊಟ್ಟು ಚಿತ್ರಹಿಂಸೆ ನೀಡಿದ್ದಾರೆ ಎಂಬ ಅಂಶವನನು ಬಹಿರಂಗಪಡಿಸಿದ್ದರು. ಇಂದು ಡಿ ಗ್ಯಾಂಗ್ ಎಸಗಿರುವ ಮತ್ತೊಂದು ಕೃತ್ಯ ಬಯಲಾಗಿದೆ.
ರೇಣುಕಾಸ್ವಾಮಿ ಅಪಹರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಚಿತ್ರದುರ್ಗ ಜಿಲ್ಲೆಯ ದರ್ಶನ್ ಅಭಿಮಾನಿ ಬಳಗದ ಅಧ್ಯಕ್ಷ ರಾಘವೇಂದ್ರ ಎಂಬಾತ ಮಾಡಿರುವ ಹೀನ ಕೃತ್ಯವೊಂದು ಬಯಲಾಗಿದೆ. ರೇಣುಕಾಸ್ವಾಮಿಯನ್ನು ಅಪಹರಿಸಿ ಶೆಡ್ಗೆ ಕರೆದುಕೊಂಡು ಹೋಗಿ ಹಲ್ಲೆ ಮಾಡಿರುವುದಲ್ಲದೇ, ರೇಣುಕಾಸ್ವಾಮಿ ಕೊಂದ ನಂತರ ಆತನ ಮೈ ಮೇಲಿದ್ದ ಚಿನ್ನಾಭರಣವನ್ನು ಈ ವ್ಯಕ್ತಿ ದೋಚಿದ್ದಾನೆ ಎನ್ನಲಾಗುತ್ತಿದೆ.
ರೇಣುಕಾಸ್ವಾಮಿ ಕೊಲೆ ಆದ ಬಳಿಕ ರಾಘವೇಂದ್ರ ಆ ಸ್ಥಳದಿಂದ ಪರಾರಿ ಆಗಿದ್ದನಂತೆ. ನಂತರ ಆತನಿಗೆ ಕರೆ ಮಾಡಿ 10 ಲಕ್ಷ ರೂಪಾಯಿ ಹಣ ಕೊಡುತ್ತೀವಿ ಎಂದಾಗ ರಾಘವೇಂದ್ರ ವಾಪಸ್ ಬಂದಿದ್ದಾನೆ. ರೇಣುಕಾಸ್ವಾಮಿ ಮೃತದೇಹವನ್ನು ಎಸೆಯಲು ರಾಘವೇಂದ್ರ ಜೊತೆಗೆ ಹೋಗಿದ್ದಾನೆ. ಆ ವೇಳೆ ರೇಣುಕಾಸ್ವಾಮಿ ಮೈಮೇಲಿದ್ದ ಚಿನ್ನದ ಆಭರಣಗಳನ್ನು ರಾಘವೇಂದ್ರ ದೋಚಿದ್ದಾನೆ. ಚಿನ್ನದ ಉಂಗುರ, ಚಿನ್ನದ ಸರ, ಬೆಳ್ಳಿ ಕಡಗ ಮತ್ತು ವಾಚ್ಗಳನ್ನು ತೆಗೆದುಕೊಂಡು ಹೋಗಿದ್ದಾನೆ.