‘ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು ಮತ್ತು ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು’ ಎಂದು ವಿಶ್ವ ಒಕ್ಕಲಿಗರ ಮಹಾಸಂಸ್ಥಾನ ಮಠದ ಚಂದ್ರಶೇಖರ ಸ್ವಾಮೀಜಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮಂಗಳವಾರ ಪಾಲ್ಗೊಂಡು ಮಾತನಾಡಿದ ಅವರು, ‘ರೈತರ ಜಮೀನು ಉಳಿಸಲು ಎಲ್ಲರೂ ಒಂದಾಗಿ ಹೋರಾಟ ನಡೆಸುವ ತುರ್ತು ಸಂದರ್ಭ ಎದುರಾಗಿದೆ. ಸರ್ಕಾರ ಹೋದರೂ ತೊಂದರೆ ಇಲ್ಲ. ವಕ್ಫ್ ಮಂಡಳಿ ರದ್ದು ಮಾಡುವ ನಿರ್ಧಾರ ತೆಗೆದುಕೊಳ್ಳಬೇಕು. ದೇಶದಲ್ಲಿ ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಬೇಕು.. ‘ವಕ್ಫ್ ಮಂಡಳಿಯೇ ಇಲ್ಲದಂತೆ ಮಾಡಿದರೆ ಆಗ, ಭಾರತೀಯರೆಲ್ಲರೂ ನೆಮ್ಮದಿಯಿಂದ ಇರಲು ಸಾಧ್ಯ ಎಂದೂ ಹೇಳಿದರು.
ವಕ್ಫ್ ಆಸ್ತಿ ವಿವಾದದ ಹಿನ್ನೆಲೆಯಲ್ಲಿ ರೈತರು ಮತ್ತು ಅವರ ಭೂಮಿಯ ರಕ್ಷಣೆಗೆ ಎಲ್ಲರೂ ಒಗ್ಗಟ್ಟಾಗಬೇಕು. ಮುಸ್ಲಿಂ ಸಮುದಾಯಕ್ಕೆ ಮತದಾನದ ಹಕ್ಕು ಇಲ್ಲದಿರುವ ಕಾನೂನು ತರಬೇಕು. ಬೇರೆಯವರ ಭೂಮಿಯನ್ನು ಕಸಿದುಕೊಳ್ಳುವುದು ಧರ್ಮವಲ್ಲ. ಮೊದಲು ವಕ್ಫ್ ಬೋರ್ಡ್ ಇಲ್ಲದಂತೆ ನೋಡಿಕೊಳ್ಳಬೇಕು. ರೈತರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಎಲ್ಲರೂ ಹೋರಾಟ ಮಾಡಬೇಕು… ವಕ್ಫ್ ಬೋರ್ಡ್ ಯಾರಿಗೆ ಬೇಕಾದ್ರೂ ಭೂಮಿ ಕೊಡಬಹುದು ಅಂತಾರೆ. ಅದೊಂದು ದೊಡ್ಡ ಅನ್ಯಾಯ… ಯಾರೋ ಬೇರೆಯವರ ಭೂಮಿ ಕಬಳಿಸುವುದು ಧರ್ಮವಲ್ಲ… ಹಾಗಾಗಿ, ರೈತರ ಜಮೀನು ಅವರ ಬಳಿಯೇ ಉಳಿಯುವಂತೆ ಎಲ್ಲರೂ ಹೋರಾಡಬೇಕು ಎಂದರು. ಅಂತೆಯೇ ‘ರೈತರು ಅನ್ನದಾತರು.. ಅವರು ಆಹಾರವನ್ನು ಉತ್ಪಾದಿಸುವವರು. ಆದ್ದರಿಂದ ಅವರನ್ನು ಉಳಿಸಬೇಕು ಮತ್ತು ಬೆಳೆಸಬೇಕು. ಅವರ ಭೂಮಿ ಮತ್ತು ಆಸ್ತಿಯನ್ನು ಯಾರೂ ಕಸಿದುಕೊಳ್ಳದಂತೆ ನೋಡಿಕೊಳ್ಳಬೇಕು. ಮುಸ್ಲಿಂ ಸಮುದಾಯಕ್ಕೆ ಮತದಾನದ ಅಧಿಕಾರ ಇಲ್ಲದ ಕಾನೂನು ತರಬೇಕು. ಪಾಕಿಸ್ತಾನದಲ್ಲಿ ಇತರೆ ಧರ್ಮೀಯರಿಗೆ ಅಲ್ಲಿ ಮತ ಹಾಕುವ ಅಧಿಕಾರವಿಲ್ಲ. ಅದೇ ರೀತಿ ಭಾರತದಲ್ಲೂ ಮುಸ್ಲಿಮರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಬೇಕು. ಅವರಿಗೆ ಮತದಾನದ ಹಕ್ಕು ಇಲ್ಲದಂತೆ ಮಾಡಿದರೆ ಆಗ ರಾಜಕಾರಣಿಗಳು ಯಾವುದೇ ರೀತಿಯ ಓಲೈಕೆ ರಾಜಕಾರಣ ಮಾಡುವುದಿಲ್ಲ. ಅವರು ತಮ್ಮಷ್ಟಕ್ಕೇ ಉಳಿಯುತ್ತಾರೆ ಮತ್ತು ಎಲ್ಲರೂ ಶಾಂತಿಯುತವಾಗಿ ಉಳಿಯಬಹುದು” ಎಂದರು.
ರೈತರ ಪರ ಹೋರಾಡಲು ಎಲ್ಲರೂ ಒಂದಾಗಬೇಕು ಎಂದು ಹೇಳಿದ ಶ್ರೀಗಳು, ಈ ವಿಚಾರದಲ್ಲಿ (ವಕ್ಫ್) ಎಲ್ಲರೂ ಒಗ್ಗಟ್ಟಾಗಿ ನಿಲ್ಲಬೇಕು, ಸರ್ಕಾರ ಬಿದ್ದರೂ ಯಾವುದೇ ಸಮಸ್ಯೆ ಇಲ್ಲ, ನಮ್ಮ ರೈತರನ್ನು ಉಳಿಸಿ-ಬೆಳೆಸಬೇಕು, ಅದು ನಮ್ಮ ಮುಖ್ಯ ಗುರಿಯಾಗಬೇಕು. ನಮ್ಮ ಉದ್ದೇಶದಲ್ಲಿ ನಾವು ವಿಜಯಶಾಲಿಯಾಗಲು ಸಂಕಲ್ಪ ಮಾಡಬೇಕು, ರೈತರ ಭೂಮಿ ರೈತರೊಂದಿಗೆ ಉಳಿಯಬೇಕು ಎಂದರು. ಅಂದಹಾಗೆ ತಮ್ಮ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂದು ಕರ್ನಾಟಕದ ಕೆಲವು ಭಾಗಗಳಲ್ಲಿ ರೈತರು ಮತ್ತು ಇತರರು ಆರೋಪಿಸಿದ ನಂತರ, ವಿವಿಧ ರೈತ ಗುಂಪುಗಳು, ಸಂಘಟನೆಗಳು ಮತ್ತು ಪ್ರತಿಪಕ್ಷ ಬಿಜೆಪಿಯಿಂದ ಪ್ರತಿಭಟನೆಗಳು ನಡೆದಿವೆ. ಆರಂಭದಲ್ಲಿ ವಿಜಯಪುರ ಜಿಲ್ಲೆಯ ಒಂದು ಭಾಗದ ರೈತರಿಂದ ತಮ್ಮ ಜಮೀನುಗಳನ್ನು ವಕ್ಫ್ ಆಸ್ತಿ ಎಂದು ಗುರುತಿಸಲಾಗಿದೆ ಎಂಬ ಆರೋಪವಿತ್ತು.
ಬಳಿಕ ರಾಜ್ಯದ ಇತರ ಕೆಲವು ಸ್ಥಳಗಳಿಂದ ಮತ್ತು ಮಠಗಳಂತಹ ಕೆಲವು ಸಂಸ್ಥೆಗಳು ಮತ್ತು ಧಾರ್ಮಿಕ ಸಂಸ್ಥೆಗಳಿಂದಲೂ ಇಂತಹ ಆರೋಪಗಳು ಬಂದವು. ಈ ಕುರಿತ ಗೊಂದಲ ಹೆಚ್ಚಾಗುತ್ತಿದ್ದಂತೆಯೇ ಎಚ್ಚೆತ್ತ ಸಿಎಂ ಸಿದ್ದರಾಮಯ್ಯ ಅವರು ರೈತರಿಗೆ ನೀಡಿರುವ ಎಲ್ಲಾ ನೋಟಿಸ್ಗಳನ್ನು ತಕ್ಷಣವೇ ಹಿಂಪಡೆಯುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು ಮತ್ತು ಯಾವುದೇ ಸೂಚನೆಯಿಲ್ಲದೆ ಭೂ ದಾಖಲೆಗಳಲ್ಲಿ ಯಾವುದೇ ಅನಧಿಕೃತ ತಿದ್ದುಪಡಿಗಳನ್ನು ಸಹ ರದ್ದುಗೊಳಿಸಬೇಕು ಎಂದು ಆದೇಶಿಸಿದ್ದರು.