ಬಾಗಲಕೋಟೆ: ಇಳಕಲ್ನಲ್ಲಿ ಹೇರ್ ಡ್ರೈಯರ್ ಸ್ಫೋಟಗೊಂಡು, ಮಹಿಳೆಯೊಬ್ಬರು ಗಾಯಗೊಂಡಿದ್ದರು. ಈ ಸುದ್ದಿ ಬರೀ ರಾಜ್ಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದ್ದು, ಹೇರ್ ಡ್ರೈಯರ್ ಸ್ಫೋಟ ಇದು ಆಕಸ್ಮಿಕ ಸ್ಫೋಟವಲ್ಲ, ಉದ್ದೇಶಪೂರ್ವಕ ಕೃತ್ಯ ಎಂದು ಬಹಿರಂಗವಾಗಿದೆ.
ಕಳೆದ ಎರಡು ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ಇಳಕಲ್ ನಗರದಲ್ಲಿ ಹೇರ್ ಡ್ರೈಯರ್ ಸ್ಫೋಟಗೊಂಡ ಈ ಘಟನೆ ಭಾರೀ ಚರ್ಚೆಗೆ ಕಾರಣವಾಗಿತ್ತು. ಆನ್ಲೈನ್ನಲ್ಲಿ ಬಂದ ಹೇರ್ ಡ್ರೈಯರ್ ಬಳಸಲು ಮುಂದಾದಾಗ ಹೇರ್ಡ್ರೈಯರ್ ಬ್ಲಾಸ್ಟ್ ಆಗಿತ್ತು. ಹೇರ್ ಡ್ರೈಯರ್ ಸ್ಫೋಟಗೊಂಡ ಪರಿಣಾಮ ಮೃತ ಯೋಧನ ಪತ್ನಿಯ ಎರಡು ಕೈಗಳ ಮುಂಗೈ (ಹಸ್ತಗಳು) ಛಿದ್ರ ಛಿದ್ರವಾಗಿದ್ದು, ಬೆರಳುಗಳೆಲ್ಲ ಗುರುತೇ ಸಿಗದಂತೆ ಚೆಲ್ಲಾಪಿಲ್ಲಿಯಾಗಿತ್ತು.
ಸದ್ಯ ಈ ಘಟನೆ ಬಗ್ಗೆ ಬಿಗ್ ಅಪ್ಡೇಟ್ ಸಿಕ್ಕಿದ್ದು, ಹೇರ್ ಡ್ರೈಯರ್ ಸ್ಫೋಟದ ಹಿಂದೆ ಲವ್ ಕಹಾನಿ ಕೇಸ್ ಬೇಧಿಸುವಲ್ಲಿ ಬಾಗಲಕೋಟೆ ಪೊಲೀಸರು ಯಶಸ್ವಿಯಾಗಿದ್ದಾರೆ. . ಇದು ಆಕಸ್ಮಿಕ ಸ್ಫೋಟ ಅಲ್ಲ. ಉದ್ದೇಶಪೂರ್ವಕ ಸ್ಪೋಟ ಎಂಬ ವಿಚಾರ ಬೆಳಕಿಗೆ ಬಂದಿದೆ. ಅಕ್ರಮ ಸಂಬಂಧಕ್ಕೆ ಅಡಿಯಾಗಿದ್ದವಳ ಕಥೆ ಮುಗಿಸಲು ಸ್ಕೆಚ್ ಹಾಕಿ ಬ್ಲಾಸ್ಟ್ ಮಾಡಲಾಗಿದೆ. ತನ್ನ ಪ್ರೇಯಸಿಯ ಗೆಳತಿಯನ್ನು ಮುಗಿಸಲು ಹಾಕಿದ್ದ ಸ್ಕೆಚ್ಗೆ ಲವರ್ ಕೈ ಕಳೆದುಕೊಂಡಿದ್ದಾಳೆ.
ಪ್ರಕರಣದ ಆರೋಪಿ ಹೇರ್ ಡ್ರೈಯರ್ ನಲ್ಲಿ ಸ್ಪೋಟಕ ಅಳವಡಿಸಿ ಕೋರಿಯರ್ ಮಾಡಿದ್ದನು. ಸದ್ಯ ಹೇರ್ ಡ್ರೈಯರ್ ಸ್ಪೋಟಕ ತಯಾರಿಸಿದ ಅರೋಪಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಸಿದ್ದಪ್ಪ ಅಲಿಯಾಸ್ ಶರಣಪ್ಪ ಶೀಲವಂತ ಹೇರ್ ಡ್ರೈಯರ್ ಸ್ಪೋಟಕ ತಯಾರಿಸಿದ ಅರೋಪಿಯಾಗಿದ್ದಾನೆ.
ಹೇರ್ ಡ್ರೈಯರ್ ಸ್ಪೋಟ ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಎಸ್ಪಿ ಅಮರನಾಥ ರೆಡ್ಡಿ, ಮೃತ ಯೋಧನ ಪತ್ನಿ ಹಾಗೂ ಸಿದ್ದಪ್ಪ ಎಂಬುವವನ ಜೊತೆ ಅಕ್ರಮ ಸಂಬಂಧ ಇದ್ದು, ಇಬ್ಬರೂ ಒಂದೇ ಗ್ರಾಮದವರಾಗಿದ್ದರಿಂದ ಮದುವೆ ಮೊದಲು ಇಬ್ಬರ ನಡುವೆ ಸ್ನೇಹ ಇರುತ್ತದೆ, ಸಿದ್ದಪ್ಪ ಪುರುತಗೇರಿ ನಿವಾಸಿಯಾಗಿದ್ದನು. ಈಕೆಯ ಗಂಡ ಭಾರತೀಯ ಸೇನೆಯಲ್ಲಿ ಸೈನಿಕನಾಗಿದ್ದನು. ಆತ 2017 ರಲ್ಲಿ ಕರ್ತವ್ಯದ ವೇಳೆ ಪತಿ ಪಾಪಣ್ಣ ಮೃತಪಟ್ಟಿದ್ದರು. ಪತಿ ತೀರಿಕೊಂಡ ಬಳಿಕ ಮತ್ತೆ ಸಿದ್ದಪ್ಪ ಹಾಗೂ ಮೃತ ಯೋಧನ ಪತ್ನಿಯ ನಡುವೆ ಸಂಬಂಧ ಇರುತ್ತದೆ. ಸಿದ್ದಪ್ಪ ಯೋಧನ ಪತ್ನಿಯ ಮನೆಗೆ ಹೋಗಿ ಬರೋದು ಇತ್ತು.
ಮಿಲ್ಟ್ರಿ ಕ್ಯಾಂಟೀನ್ ಗೆ ಹೋದಾಗ ಮೃತ ಯೋಧನ ಪತ್ನಿ ತನ್ನ ಗೆಳತಿಯನ್ನು ಸಿದ್ದಪ್ಪನಿಗೆ ಪರಿಚಯ ಮಾಡಿದ್ದಳು. ಇಬ್ಬರ ಅನೈತಿಕ ಸಂಬಂಧ ತಿಳಿದ ಬಳಿಕ ಸ್ನೇಹಿತೆ ಯೋಧನ ಪತ್ನಿಗೆ ಬುದ್ದಿ ಹೇಳಿದ್ದರು. ಸ್ನೇಹಿತೆ ಬುದ್ಧಿವಾದ ಹೇಳಿದ ಬಳಿಕ ಸಿದ್ಧಪ್ಪನನ್ನು ಯೋಧನ ಪತ್ನಿ ದೂರ ಮಾಡಿದ್ದರು. ತಮ್ಮಿಬ್ಬರ ಸಂಬಂಧಕ್ಕೆ ಪ್ರೇಯಸಿಯ ಸ್ನೇಹಿತೆ ಅಡ್ಡಿಯಾಗಿದ್ದಾಳೆ ಎಂದು ಕೋಪದಿಂದ ಪ್ರೇಯಸಿಯ ಸ್ನೇಹಿತೆಯನ್ನು ಕೊಲೆ ಮಾಡಲು ಆರೋಪಿ ಸಿದ್ದಪ್ಪ ಸಂಚು ರೂಪಿಸಿದ್ದನು. ಬಳಿಕ ಹೇರ್ ಡ್ರೈಯರ್ನಲ್ಲಿ ಬಾಂಬ್ ಇರಿಸಿ ಕಳಿಸಿರುವುದಾಗಿ ತಿಳಿದು ಬಂದಿದೆ.