ರಾಮನಗರ : ತಮ್ಮನ್ನು ರಣಹೇಡಿ ಎಂದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿಕೆಯ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ರಣಹೇಡಿ ನಾನಲ್ಲ, ನೇರವಾಗಿ ಚುನಾವಣೆ ಎದುರಿಸಲಾಗದೆ ರಾತ್ರೋರಾತ್ರಿ ಮತದಾರರಿಗೆ QR ಕೋಡ್ ಗಿಫ್ಟ್ ಕೂಪನ್, ಹಣ ಹಂಚಿಕೆ ಮಾಡುವವರು ರಣಹೇಡಿಗಳು ಎಂದು ತಿರುಗೇಟು ಕೊಟ್ಟರು. ಬಿಡದಿ ಸಮೀಪದ ಕೇತಿಗಾನಹಳ್ಳಿ ಮತಗಟ್ಟೆಯಲ್ಲಿ ಮತದಾನ ಮಾಡಿದ ನಂತರ ಅವರು ಮಾಧ್ಯಮಗಳ ಜತೆ ಮಾತನಾಡಿದರು. ರಣಹೇಡಿ ನಾನಲ್ಲ, ರಣಹೇಡಿಗಳು ಅವರು, ಕುತಂತ್ರದ ರಾಜಕಾರಣಿಗಳು ಅವರು. ಯಾರು ರಣಹೇಡಿ ಎಂದು ಮುಂದೆ ಚರ್ಚೆ ಮಾಡೋಣ. ರಣಹೇಡಿ ಸಂಸ್ಕೃತಿ ಡಿ.ಕೆ.ಶಿವಕುಮಾರ್ ಅವರದ್ದು. ನಾವು ನೇರವಾಗಿಯೇ ಚುನಾವಣೆ ಮಾಡುತ್ತಿದ್ದೇವೆ ಎಂದು ಗುಡುಗಿದರು. ರಾತ್ರೋರಾತ್ರಿ ಹೋಗಿ ಕಳ್ಳಕಳ್ಳವಾಗಿ ಜನರಿಗೆ ಕ್ಯೂ ಆರ್ ಕೋಡ್ ಇರುವ ಗಿಫ್ಟ್ ಕೂಪನ್ ಗಳನ್ನು ಹಂಚಿಕೆ ಮಾಡಿದ ವ್ಯಕ್ತಿ ರಣಹೇಡಿತನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಕುಟುಕಿದರು.
ಗಿಫ್ಟ್ ಕೂಪನ್ ಬಗ್ಗೆ ಚುನಾವಣಾ ಆಯೋಗಕ್ಕೆ ಈಗ ದೂರು ಕೊಟ್ಟರೂ ಏನು ಪ್ರಯೋಜನ ಇಲ್ಲ. ಹಿಂದೆ ಹಲವು ಬಾರಿ ದೂರು ಕೊಟ್ಟರೂ ಆಯೋಗ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ದೂರು ಕೊಟ್ಟರೆ ಏನು ಉಪಯೋಗ? ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾನು ಚುನಾವಣಾ ಆಯೋಗಕ್ಕೆ ಕೇಳುತ್ತೇನೆ. ಈ ರೀತಿ ಚುನಾವಣೆ ಮಾಡುವ ಬದಲು ನೇರವಾಗಿ, ಮುಕ್ತವಾಗಿ ಗಿಫ್ಟ್, ಹಣ ಹಂಚುವ ವ್ಯವಸ್ಥೆಯನ್ನೇ ತನ್ನಿ. ಅವರವರ ಶಕ್ತಿ ಅನುಸಾರ ಹಣ ಹಂಚಿ ವೋಟು ಪಡೆಯುವ ವ್ಯವಸ್ಥೆ ಜಾರಿಗೆ ತನ್ನಿ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಈ ರೀತಿಯ ವ್ಯವಸ್ಥೆ ಬಂದರೆ ಕಾಂಗ್ರೆಸ್ ನವರಿಗೆ ಒಳ್ಳೆಯದು ಎಂದು ಮಾಜಿ ಮುಖ್ಯಮಂತ್ರಿ ಅವರು ವ್ಯಂಗ್ಯವಾಡಿದರು. ಇದನ್ನು ಚುನಾವಣೆ ಎಂದು ಕರೆಯಬೇಕಾ? ಇದನ್ನು ಚುನಾವಣಾ ಅಂತ ಪರಿಗಣಿಸಲು ಸಾಧ್ಯವಾ? ಪ್ರಜಾಪ್ರಭುತ್ವದ ಹಬ್ಬ ಎಂದು ಇದನ್ನು ಕರೆಯಲು ಆಗುತ್ತದೆಯೇ? ದುಡ್ಡು ಇರುವವರಿಗೆ ಲೂಟಿ ಮಾಡುವವರಿಗೆ ಇದು ಹಬ್ಬವೇ ಹೊರತು ಜನಸಾಮಾನ್ಯರಿಗೆ ಅಲ್ಲ. ಚುನಾವಣಾ ಆಯೋಗ ಬಾಗಿಲು ಹಾಕಿಕೊಳ್ಳುವುದು ಒಳ್ಳೆಯದು. ಚುನಾವಣಾ ಆಯೋಗ ವ್ಯವಸ್ಥೆಯನ್ನು ಬದಲಾವಣೆ ಮಾಡಿಕೊಳ್ಳೋದು ಉತ್ತಮ ಎಂದು ಮಾಜಿ ಮುಖ್ಯಮಂತ್ರಿ ಅವರು ವಾಗ್ದಾಳಿ ನಡೆಸಿದರು. ಈ ರೀತಿ ಅಡ್ಡದಾರಿಯಲ್ಲಿ, ವಾಮಮಾರ್ಗದಲ್ಲಿ ಮತ ಪಡೆಯುವ ಮಹಾನುಭಾವರು ಜನರಿಗೆ ಬುದ್ದಿ ಹೇಳಿದ್ದೇ ಹೇಳಿದ್ದು. ಈ ಮಹಾನುಭಾವ ಇಲ್ಲಿ ಇದ್ದಾರಲ್ಲ, ದೇಶದ ಬಗ್ಗೆ ಚರ್ಚೆ ಮಾಡ್ತಾರಲ್ಲ ಈ ಇಬ್ಬರು ಮಹಾನುಭಾವರು.. ಇವರ ಬಗ್ಗೆ ಚುನಾವಣಾ ಆಯೋಗ ಏನು ಮಾಡುತ್ತಿದೆ? ಎಂದು ಡಿಕೆಶಿ ಸಹೋದರರ ವಿರುದ್ಧ ಮಾಜಿ ಮುಖ್ಯಮಂತ್ರಿಗಳು ಹರಿಹಾಯ್ದರು.