ಬಡವರ ಮಕ್ಳು ಗೆಲ್ಬೇಕು ಕಣ್ರಯ್ಯಾ ಅಂತ ಹೇಳ್ತಾನೆ ಸ್ಟಾರ್ ಆದ್ರು ನಟ ಡಾಲಿ ಧನಂಜಯ್. ಆದ್ರೆ ಬಡವ ರಾಸ್ಕಲ್ ಆದ ಮೇಲೆ ಧನಂಜಯ್ ನಟನೆಯ 11 ಸಿನಿಮಾಗಳು ರಿಲೀಸ್ ಆಗಿವೆ. ಯಾವ ಸಿನಿಮಾ ಸಹ ನಿರೀಕ್ಷಿತ ಗೆಲುವು ಕಂಡಿರಲಿಲ್ಲ. ಇದೀಗ ಜೀಬ್ರಾ ಸಿನಿಮಾ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಶುಕ್ರವಾರದಿಂದ ಥಿಯೇಟರ್ ನಲ್ಲಿ ಝೀಬ್ರಾ ಆಟ ಶುರುವಾಗಿದೆ. ಝೀಬ್ರಾ ಸಿನಿಮಾದಲ್ಲಿ ಡಾಲಿ ಧನಂಜಯ್ ವಿಲನ್ ಆದ್ರೂ ಸಹ ಹೀರೋಗಿಂತ ಹೆಚ್ಚು ಸ್ಕೋಪ್ ಸಿಕ್ಕಿದೆ. ಸತ್ಯದೇವ್ ಗಿಂತ ಹೆಚ್ಚು ಸ್ಕ್ರೀನ್ ಸ್ಪೇಸ್ ಡಾಲಿ ಪಾಲಾಗಿದೆ.
ಬ್ರಿಲಿಯಂಟ್ ಆಗಿದೆ ಝೀಬ್ರಾ ಚಿತ್ರಕಥೆ!
ಈಶ್ವರ್ ಕಾರ್ತಿಕ್ ನಿರ್ದೇಶನದಲ್ಲಿ ಜೀಬ್ರಾ ಸಿನಿಮಾ ದೃಶ್ಯರೂಪ ಪಡ್ಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರದ ಆಗುಹೋಗುಗಳನ್ನ ಕೂಲಂಕುಷವಾಗಿ ಈ ಸಿನಿಮಾದಲ್ಲಿ ತೋರಿಸಲಾಗಿದೆ. ವ್ಯವಸ್ಥೆ ಕುಂದು ಕೊರತೆಗಳನ್ನೇ ಬಂಡವಾಳ ಮಾಡಿಕೊಂಡು ಹೇಗೆ ಕೋಟಿ ಕೋಟಿ ವಂಚನೆ ಮಾಡಬಹುದು ಎಂಬುದನ್ನ ತೋರಿಸಲಾಗಿದೆ. ಹಾಗಂತ ಎಲ್ಲೂ ಸಿನಿಮಾ ಬೋರಿಂಗ್ ಅನಿಸೋದಿಲ್ಲ.. 2 ಗಂಟೆ 44 ನಿಮಿಷ ಇರೋ ಸಿನಿಮಾ.. ಆರಂಭದಿಂದ ಅಂತ್ಯದ ವರೆಗೂ ಎಂಗೇಜಿಂಗ್ ಆಗಿದೆ. ಒಂದು ಕ್ಷಣ ಕೂಡ ಬೋರಿಂಗ್ ಆಗದಂತೆ ಸಖತ್ ಬ್ರಿಲಿಯಂಟ್ ಆಗಿ ನಿರ್ದೇಶಕರು ಚಿತ್ರಕಥೆಯನ್ನ ಎಣೆದಿದ್ದಾರೆ.
ಡಾಲಿ ನಟ ರಾಕ್ಷಸನೇ!
ಇಲ್ಲಿ ಧನಂಜಯ್ ಡಾಲಿಯಾಗಿಯೇ ಕಾಣಿಸಿಕೊಂಡಿದ್ದಾರೆ. ಅವರ ಕೈ ಮೇಲೆ ಡಿ ಅನ್ನೋ ಅಕ್ಷರ ಇದೆ.. ಡಿ ಅಂದ್ರೆ? ಡಾಲಿ ಕೂಡ ಹೌದು.. ಡೆವಿಲ್ ಕೂಡ ಹೌದು.. ಒಂದು ಹಂತದಲ್ಲಿ ಕ್ರೂರತಿಕ್ರೂರವಾಗಿದ್ದ ಡಾಲಿ ಆ ನಂತರ ರಕ್ತ ಕೈಗೆ ಮೈತ್ಕೊಳಲ್ಲ ಅಂತ ಡಿಸೈಡ್ ಮಾಡ್ತಾರೆ. ಅದ್ಯಾಕೆ ಅಂತ ನೀವು ಥಿಯೇಟರ್ ನಲ್ಲಿಯೇ ನೋಡಬೇಕು. ಕಿಂಗ್ ನ ಮೀಟ್ ಮಾಡಬೇಕು. ಕಿಂಗ್ ಮೇಕರ್ ಆಗಬೇಕು ಅಂತ ಹೊರಡೋ ಡಾಲಿಗೆ ಇಲ್ಲಿ ಹೆಚ್ಚು ಮಾತಿಲ್ಲ. ಆದ್ರೆ ಅವರ ಬಾಡಿ ಲಾಂಗ್ವೇಜ್. ಅವರ ಲುಕ್, ಅವರ ವಾಕಿಂಗ್ ಸ್ಟೈಲ್ ಮೂಲಕವೇ ಪಾತ್ರವನ್ನ ನುಂಗು ಹಾಕಿದ್ದಾರೆ.
ಬ್ಯಾಂಕ್ ಎಂಪ್ಲಾಯ್ ಸತ್ಯದೇವ್
ಇನ್ನು ಸತ್ಯದೇವ್ ಬ್ಯಾಂಕ್ ಎಂಪ್ಲಾಯ್ ಆಗಿ.. ಏನೋ ಮಾಡಲು ಹೋಗಿ ಇನ್ನೇನು ಮಾಡಿ ಯಡವಟ್ಟು ಮಾಡಿಕೊಳ್ಳೋ ಪಾತ್ರವನ್ನ ಸಖತ್ ಆಗಿಯೇ ನಿಭಾಯಿಸಿದ್ದಾರೆ. ಸತ್ಯದೇವ್ ಗೆ ಸಾಥ್ ಕೊಟ್ಟಿರೋ ಹಾಸ್ಯ ನಟ ಸತ್ಯ. ತಮ್ಮ ಟೈಮಿಂಗ್ ಮೂಲಕ ನಗೆ ಉಕ್ಕಿಸುತ್ತಾರೆ. ಹಾಗೆ ಬಾಬಾ ಅವತಾರದಲ್ಲಿ ಕಾಣಿಸಿಕೊಂಡಿರೋ ಸತ್ಯರಾಜ್ ಸಹ ಶಿಳ್ಳೆ ಚಪ್ಪಾಳೆ ಗಿಟ್ಟಿಸಿಕೊಳ್ತಾರೆ. ಹಾಗೆ ವಿಲನ್ ಆಗಿ ಅಭಿನಯಿಸಿರೋ ಸುನೀಲ್ ಸಹ ಕಮಾಲ್ ಮಾಡಿದ್ದಾರೆ.