ಕಾಂಗ್ರೆಸ್ ಪಕ್ಷದಲ್ಲಿ ಸಂಕ್ರಾಂತಿ ನಂತರ ಭಾರೀ ಬದಲಾವಣೆ ನಡೆಯುತ್ತದೆ ಎಂದು ರಾಜಕೀಯ ವಲಯದಲ್ಲಿ ಚರ್ಚೆ ನಡೆಯುತ್ತಿದೆ. ಅದಕ್ಕೆ ಪೂರಕವಾಗಿ ಡಿಸಿಎಂ ಡಿಕೆ ಶಿವಕುಮಾರ್ ಕೂಡ ಒಪ್ಪಂದ ಆಗಿದೆ ಎಂದು ಖಾಸಗೀ ವಾಹಿನಿಗೆ ಕೊಟ್ಟ ಸಂದರ್ಶನದಲ್ಲಿ ಮಾತನಾಡಿದ್ದರು. ಈ ಬಗ್ಗೆ ಗೃಹ ಸಚಿವ ಡಾ. ಜಿ ಪರಮೇಶ್ವರ್ ಮಾತನಾಡಿದ್ದು, ಡಿಕೆ ವಿರುದ್ದ ಕಿಡಿಕಾರಿದ್ದಾರೆ.
ಅಧಿಕಾರ ಹಂಚಿಕೆ ಒಪ್ಪಂದ ಬಗ್ಗೆ ಗೃಹ ಸಚಿವ ಪರಮೇಶ್ವರ್ ರೋಷಾಗ್ನಿಯಿಂದ ಮಾತನಾಡಿದ್ದಾರೆ. ಸಿಎಂ ಅಧಿಕಾರ ಒಪ್ಪಂದ ಆಗಿದೆ ಅಂದ್ರೆ ನಾವೆಲ್ಲ ಯಾಕಿರಬೇಕು..? ಅವರಿಬ್ಬರೇ ರಾಜಕಾರಣ ಮಾಡಿ..ಅವರಿಬ್ಬರೇ ನಡೆಸಲಿ..ನಾವೆಲ್ಲ ಯಾಕೆ? ಎಂದು ಡಿಕೆಶಿ ಅಧಿಕಾರ ಒಪ್ಪಂದ ಹೇಳಿಕೆ ಬಗ್ಗೆ ಸಚಿವ ಪರಮೇಶ್ವರ್ ಕೆಂಡಾಮಂಡಲರಾಗಿದ್ದಾರೆ.
ಡಿ.ಕೆ ಶಿವಕುಮಾರ್ ಯಾವ ಅರ್ಥದಲ್ಲಿ ಹೇಳಿದ್ದಾರೋ ನನಗೆ ಗೊತ್ತಿಲ್ಲ, ಅಂತಹ ಒಪ್ಪಂದ ಆಗಿಲ್ಲ ಎಂದು ಸಿಎಂ ಈಗಾಗಲೇ ಸ್ಪಷ್ಟವಾಗಿ ಹೇಳಿದ್ದಾರೆ. ಈ ಬಗ್ಗೆ ದೆಹಲಿ ಮತ್ತು ರಾಜ್ಯದಲ್ಲಿ ಒಂದಿಬ್ಬರನ್ನು ಕೇಳಿದ್ದೇನೆ. ಸಿಎಂ ಕುರ್ಚಿ ಬಗ್ಗೆ ಒಪ್ಪಂದ ಆಗಿದೆ ಅಂತ ಯಾರು ಹೇಳಿಲ್ಲ. ನಮಗೆ ಹೈಕಮಾಂಡ್ ತೀರ್ಮಾನವೇ ಅಂತಿಮವಾಗಿರುತ್ತದೆ. ನಾವ್ಯಾರು ಕೂಡ ಹೈಕಮಾಂಡ್ ವಿರುದ್ಧ ಹೋದವರಲ್ಲ. ಹೈಕಮಾಂಡ್ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಾವು ಬದ್ಧ ಎಂದು ಬೆಂಗಳೂರಿನಲ್ಲಿ ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದ್ದಾರೆ.