ತೆಲುಗು ಚಿತ್ರರಂಗದಲ್ಲಿ ಭಿನ್ನ ವಿಭಿನ್ನ ಪಾತ್ರಗಳ ಮೂಲಕ ಮಿಂಚಿರುವ ಸತ್ಯದೇವ್ ಈಗ ‘ಜೀಬ್ರಾ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಲು ಹೊರಟಿದ್ದಾರೆ. ಈ ಚಿತ್ರದಲ್ಲಿ ಕನ್ನಡದ ಡಾಲಿ ಧನಂಜಯ ಕೂಡ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದು, ನಟಿ ಅಮೃತಾ ಅಯ್ಯಂಗಾರ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಂದಹಾಗೆ, ನಟ ಸತ್ಯದೇವ್ ಅವರು ತಮ್ಮ ಮೊದಲ ಕೆಲಸ, ಹೊಸ ಕನಸು ಕಂಡಿದ್ದು ಬೆಂಗಳೂರಿನಲ್ಲಿ.
ಈ ಬಗ್ಗೆ ಸತ್ಯದೇವ್ ಮಾತನಾಡುತ್ತಾ “ಮೊದಲು ಕೆಲಸ ಶುರು ಮಾಡಿದ ಊರು ಇದು. ಹೀಗಾಗಿ ಬೆಂಗಳೂರಿನ ಮೇಲೆ ವಿಶೇಷವಾದ ಪ್ರೀತಿ. ಇಲ್ಲಿರುವಾಗಲೇ ಸಿನಿಮಾಗಳಲ್ಲಿ ನಟನೆ ಶುರು ಮಾಡಬೇಕು, ನಾಯಕನಾಗಬೇಕು ಎಂಬ ಕನಸು ಕಂಡಿದ್ದು. ಇಲ್ಲಿ ಹಲವು ಕನ್ನಡ ಸಿನಿಮಾಗಳನ್ನು ನೋಡಿದ್ದೇನೆ. ‘ದುನಿಯಾ’, ‘ಓಂ’ ಸಿನಿಮಾ ಮತ್ತು ಅದರ ಹಾಡುಗಳು ಹಾಗೂ ‘ಹುಡುಗರು’ ಚಿತ್ರದ ‘ಪಂಕಜಾ..’ ಹಾಡು, ಎಲ್ಲವೂ ಈಗಲೂ ನೆನಪಿನಲ್ಲಿದೆ.
ಧನಂಜಯ ಜತೆಗಿನ ಸ್ನೇಹದ ಬಗ್ಗೆ ಹೇಳುವುದಾದರೆ?
ನನ್ನ ಸ್ನೇಹಿತರು ಧನಂಜಯ ಅವರ ಕಿರುಚಿತ್ರದ ಬಗ್ಗೆ ಹೇಳಿದ್ದರು. ಅವರ ಅಭಿನಯದ ‘ಜಯನಗರ ಫೋರ್ತ್ ಬ್ಲಾಕ್’ ಕಿರುಚಿತ್ರ ನೋಡಿದ್ದೆ. ನನ್ನ ಮತ್ತು ಧನು ಪಯಣ ಒಂದೇ ರೀತಿಯಲ್ಲಿದೆ. ಕಿರುಚಿತ್ರ, ವಿಲನ್, ಹೀರೋ ಹೀಗೆ ಎಲ್ಲಾ ವಿಷಯಗಳಲ್ಲೂ ಇಬ್ಬರಿಗೂ ಸಾಮ್ಯತೆಯಿದೆ. ಧನು ನನ್ನ ಸಹೋದರ ಇದ್ದ ಹಾಗೆ.
ನಾನು ಈ ಚಿತ್ರದಲ್ಲಿ ಬ್ಯಾಂಕ್ ಉದ್ಯೋಗಿಯಾಗಿ ಕಾಣಿಸಿಕೊಳ್ಳುತ್ತಿದ್ದೇನೆ. ಸಣ್ಣ ಟ್ರಾನ್ಸಾಕ್ಷನ್ ತಪ್ಪಿನಿಂದ ಹೇಗೆ ನನ್ನ ಮತ್ತು ಧನಂಜಯ್ ಪ್ರಪಂಚ ಮುಖಾಮುಖಿಯಾಗುತ್ತದೆ ಎನ್ನುವುದು ಈ ಚಿತ್ರದ ಸಾರಾಂಶ. ಇಂತಹ ಕಥೆಯನ್ನು ಎಲ್ಲಾ ಭಾಷೆಯ ಜನರಿಗೂ ತಲುಪಿಸಬೇಕೆಂದು ಪ್ಯಾನ್ ಇಂಡಿಯಾ ಮಾಡಿದ್ದೇವೆ. ಈ ಚಿತ್ರದ ನಿರ್ದೇಶಕರು ಕೂಡ ಈ ಮೊದಲು ಬ್ಯಾಂಕ್ನಲ್ಲಿ ಕೆಲಸ ಮಾಡುತ್ತಿದ್ದರಿಂದ ಕಥೆಯನ್ನು ಅದ್ಭುತವಾಗಿ ಮಾಡಿದ್ದಾರೆ. ಕೆಲವು ನೈಜ ಘಟನೆಗಳ ಸ್ಫೂರ್ತಿಯಿದೆ.
ಕನ್ನಡದಲ್ಲಿ ನಿಮ್ಮನ್ನು ಯಾವಾಗ ನಿರೀಕ್ಷಿಸಬಹುದು?
ಒಂದು ಫೋನ್ ಕರೆ ದೂರದಲ್ಲಿದ್ದೇನೆ ಅಷ್ಟೇ. ಕನ್ನಡ ಚಿತ್ರದಲ್ಲಿ ನಟಿಸಲು ಸದಾ ಸಿದ್ಧವಿದ್ದೇನೆ. ಧನಂಜಯ್ ಜತೆ ಒಟ್ಟಿಗೆ ಸಿನಿಮಾ ಮಾಡಲು ಮಾತುಕಥೆ ನಡೆಯುತ್ತಿದೆ. ಸಾಧ್ಯವಾದರೆ ಶೀಘ್ರದಲ್ಲೇ ಐತಿಹಾಸಿಕ ಸಿನಿಮಾ ಮಾಡಬಹುದು. ಕನ್ನಡ ಕಲಿತು, ನಾನೇ ಡಬ್ ಮಾಡಿ ಸಿನಿಮಾ ಮಾಡಬೇಕು ಎಂಬ ಆಸೆಯಿದೆ. ಎಲ್ಲಾ ಚಿತ್ರರಂಗದವರು ಒಂದಾದಾಗ ಉತ್ತಮ ಕ್ವಾಲಿಟಿ ಹಾಗೂ ದೊಡ್ಡ ಮಟ್ಟದ ಸಿನಿಮಾ ನೀಡಲು ಸಾಧ್ಯವಾಗುತ್ತದೆ. ‘ಜೀಬ್ರಾ’ ಚಿತ್ರ ನನಗೊಂದು ದೊಡ್ಡ ವೇದಿಕೆ. ಈ ಚಿತ್ರದ ಮೂಲಕ ಎಲ್ಲಾ ಚಿತ್ರರಂಗವನ್ನು ತಲುಪುತ್ತಿದ್ದೇನೆ ಎಂಬ ಖುಷಿಯಿದೆ.