ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಬ್ಯಾಟರ್ ಕೆಎಲ್ ರಾಹುಲ್ ಸದ್ಯ ಭಾರೀ ಸುದ್ದಿಯಲ್ಲಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಸರಣಿಯಲ್ಲಿ ರನ್ ಕಲೆ ಹಾಕುವಲ್ಲಿ ಹಿಂದೆ ಬಿದ್ದಿದ್ದ ಅವರನ್ನು ತಂಡದಿಂದ ಕೈ ಬಿಡಲಾಗಿತ್ತು. ಈಗ ಭಾರತ ಎ ತಂಡದ ಪರ ಆಸ್ಟ್ರೇಲಿಯಾ ಪ್ರವಾಸದಲ್ಲೂ ರನ್ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದಾರೆ. ಆದರೆ ಎಲ್ಲರ ಚಿತ್ತ ಕದ್ದಿರುವ ಒಂದು ಸುದ್ದಿ ಕನ್ನಡಿಗ ಕೆಎಲ್ ರಾಹುಲ್ ಮುಂದಿನ ಬಾರಿಯ ಐಪಿಎಲ್ ಹರಾಜಿನಲ್ಲಿ ಅವರು ಯಾವ ತಂಡವನ್ನು ಸೇರಿಕೊಳ್ಳುತ್ತಾರೆ ಎಂದು.
ಲಕ್ನೋ ಸೂಪರ್ ಜೈಂಟ್ಸ್ ಕಳೆದ ಬಾರಿಯ ನಾಯಕನನ್ನು ರಿಲೀಸ್ ಮಾಡಿ ಹರಾಜಿನ ಅಂಗಳಕ್ಕೆ ಬಿಟ್ಟಿದೆ. ಕಳೆದ ಬಾರಿಯ ಐಪಿಎಲ್ ಪಂದ್ಯದ ವೇಳೆ ಎಲ್ಎಸ್ಜಿ ಮಾಲೀಕ ಸಂಜಯ್ ಗೋಯಂಕಾ ಹಾಗೂ ರಾಹುಲ್ ಅವರ ಮಧ್ಯ ಮಾತಿನ ಚಕಮಕಿ ನಡೆದಿತ್ತು. ಈ ಕಾರಣದಿಂದ ಅವರು ಲಕ್ನೋ ಬಿಡುವುದು ಪಕ್ಕಾ ಎಂಬ ಚರ್ಚೆ ವ್ಯಾಪಕವಾಗಿತ್ತು. ಅದರಂತೆ ರಾಹುಲ್ ಈ ಬಾರಿ ಹರಾಜು ಅಂಗಳ ಪ್ರವೇಶಿಸಿದ್ದಾರೆ.
ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ ರಾಹುಲ್ ಎಲ್ಎಸ್ಜಿ ತಂಡವನ್ನು ಬಿಟ್ಟ ಬಗ್ಗೆ ತುಟಿ ಬಿಚ್ಚಿದ್ದಾರೆ. ನಾನು ಹೊಸ ತಂಡವನ್ನು ಸೇರಲು ಉತ್ಸುಕನಾಗಿದ್ದೇನೆ. ನಾನು ಯಾವ ತಂಡಕ್ಕೆ ಹೋಗುತ್ತೇನೆ ಎಂಬುದನ್ನು ಕಾತುರದಿಂದ ಕಾಯುತ್ತಿರುವೆ. ನನಗೆ ಅಲ್ಲಿ ಸ್ವಾತಂತ್ರ್ಯ ಬೇಕು. ತಂಡದ ವಾತಾವರಣ ತಿಳಿಯಾಗಿರಲಿ. ಕೊಂಚ ದೂರ ಹೋದ ಮೇಲೆ ಒಳ್ಳೆಯದನ್ನು ಹುಡುಕಲು ಮನಸ್ಸು ಬಯಸುತ್ತದೆ ಎಂದು ರಾಹುಲ್ ತಿಳಿಸಿದ್ದಾರೆ.
ಇದನ್ನು ಓದಿ: ಭಾರತ vs ಆಸೀಸ್ ಮಹಾಕದನಕ್ಕೆ ದಿನಗಣನೆ ಶುರು!
ಐಪಿಎಲ್ನಲ್ಲಿ ಮಾಲೀಕರು ಇವರನ್ನು ಕೊಳ್ಳಲು ಬಾಜಿ ಕಟ್ಟಿದರೂ ಸಹ, ರಾಹುಲ್ ಕಳೆದ 24 ತಿಂಗಳುಗಳಿಂದ ಟೀಮ್ ಇಂಡಿಯಾದ ಪರ ಟಿ20 ಪಂದ್ಯಗಳನ್ನು ಆಡಿಲ್ಲ. ಇವರು 2022ರ ನವೆಂಬರ್ನಲ್ಲಿ ಕೊನೆಯ ಬಾರಿಗೆ ಚುಟುಕು ಪಂದ್ಯವನ್ನು ಆಡಿದ್ದರು. ಈ ಬಗ್ಗೆಯೂ ಸಹ ರಾಹುಲ್ ಮಾತನಾಡಿದ್ದಾರೆ. ಆಟಗಾರನಾಗಿ ಸದ್ಯ ನಾನು ಎಲ್ಲಿ ಇರುವೆ ಎಂದು ತಿಳಿದಿದೆ. ಕಂ ಬ್ಯಾಕ್ ಮಾಡಬೇಕೆಂಬುದು ನನಗೆ ಅರಿವಿದೆ. ಹೀಗಾಗಿ ನಾನು ಮುಂಬರುವ ಐಪಿಎಲ್ ಆವೃತ್ತಿಯನ್ನು ಎದುರು ನೋಡುತ್ತಾ ಇರುವೆ. ನನ್ನ ಆಟವನ್ನು ಎಂಜಾಯ್ ಮಾಡಲು ಮುಂದಿನ ಆವೃತ್ತಿಗೆ ಕಾಯುತ್ತಿರುವೆ. ಭಾರತ ಟಿ20 ತಂಡಕ್ಕೆ ಕಂ ಬ್ಯಾಕ್ ಮಾಡುವುದೇ ನನ್ನ ಗುರಿ ಎಂದು ತಿಳಿಸಿದ್ದಾರೆ.
ಕರ್ನಾಟಕದ ಸೂಪರ್ ಸ್ಟಾರ್ ಆಟಗಾರ ಕೆಎಲ್ ರಾಹುಲ್ ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್ಗಳನ್ನು ಆಡುವ ಆಟಗಾರ. ಇವರು ಭಾರತದ ಪರ 72 ಟಿ20 ಪಂದ್ಯಗಳನ್ನು ಆಡಿದ್ದು 37.75ರ ಸರಾಸರಿಯಲ್ಲಿ 2265 ರನ್ ಸಿಡಿಸಿದ್ದಾರೆ. ಇದರಲ್ಲಿ 22 ಅರ್ಧಶತಕ ಹಾಗೂ 2 ಶತಕಗಳು ಸೇರಿವೆ. ಇವರು ಒಟ್ಟಾರೆ ಐಪಿಎಲ್ನಲ್ಲಿ 132 ಪಂದ್ಯಗಳನ್ನು ಆಡಿದ್ದು, 134.61 ಸ್ಟ್ರೈಕ್ ರೇಟ್ನಲ್ಲಿ ರನ್ ಕಲೆ ಹಾಕಬಲ್ಲ ಪ್ಲೇಯರ್. ಇವರು ಐಪಿಎಲ್ನಲ್ಲಿ 4683 ರನ್ ಬಾರಿಸಿದ್ದಾರೆ. ಇದರಲ್ಲಿ 4 ಶತಕ ಹಾಗೂ 37 ಅರ್ಧಶತಕಗಳು ಸೇರಿವೆ. ಆಸ್ಟ್ರೇಲಿಯಾ ವಿರುದ್ಧ ಬಾರ್ಡರ್ ಗವಾಸ್ಕರ್ ಟ್ರೋಫಿಗೂ ಇವರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.