ರಾಜ್ಯಾದ್ಯಂತ ಬೆಳಕಿಗೆ ಬಂದಿದ್ದ ಕಬ್ಬಿಣದ ಅದಿರು ಅಕ್ರಮ ಸಾಗಾಟ ಹಾಗೂ ರಫ್ತು ಪ್ರಕರಣಗಳು ಮತ್ತೆ ಸುದ್ದಿಯಲ್ಲಿವೆ. ಈ ಹಿಂದೆ ಸಿಬಿಐ ಮುಕ್ತಾಯಗೊಳಿಸಿದ ಹಲವು ಪ್ರಕರಣಗಳಿಗೆ ಕರ್ನಾಟಕ ರಾಜ್ಯ ಸರ್ಕಾರ ಇದೀಗ ಮರು ಜೀವ ನೀಡಿದೆ. ಸಿಬಿಐ ತನಿಖೆಗೆ ನಿರಾಕರಿಸಿದ ಎಲ್ಲಾ 6 ಪ್ರಕರಣಗಳನ್ನ ಎಸ್ಐಟಿ ತನಿಖೆಗೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನ ಮಾಡಿದೆ. ಈ ಮೂಲಕ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಿದ್ದರಾಮಯ್ಯ ಸರ್ಕಾರ ಮರು ಹುಟ್ಟು ನೀಡಿದೆ.
ಕರ್ನಾಟಕ ಲೋಕಾಯುಕ್ತ ಕಾಯ್ದೆ 1984ರ ಅಡಿ ಲೋಕಾಯುಕ್ತ ಸಂಸ್ಥೆ ತನಿಖೆ ನಡೆಸಬೇಕಿದೆ. ಈ ಕಾಯ್ದೆಯ ಸೆಕ್ಷನ್ 7 (2-ಎ) ಅಡಿ ತನಿಖೆ ನಡೆಯಲಿದ್ದು, ಲೋಕಾಯುಕ್ತ ಸಂಸ್ಥೆಯ ಎಸ್ಐಟಿ ತಂಡಕ್ಕೆ ತನಿಖೆ ಹೊಣೆ ಹೆಗಲೇರಿದೆ.
ತನಿಖೆ ನಡೆಯಲಿರುವ ಪ್ರಕರಣಗಳು ಯಾವುವು?
ಪ್ರಮುಖವಾಗಿ 6 ಪ್ರಕರಣಗಳ ತನಿಖೆಯನ್ನ ಲೋಕಾಯುಕ್ತ ಎಸ್ಐಟಿ ನಡೆಸಬೇಕಿದೆ. ಕರ್ನಾಟಕದ ನವ ಮಂಗಳೂರು ಹಾಗೂ ಕಾರವಾರ ಬಂದರುಗಳಿಂದ ಅದಿರು ರಫ್ತು ಮಾಡಿದ ಪ್ರಕರಣ, ಗೋವಾದ ಮರ್ಮಗೋವಾ ಹಾಗೂ ಪಣಜಿ ಬಂದರುಗಳಿಂದ ಅದಿರು ಸಾಗಾಟ, ತಮಿಳುನಾಡಿನ ಎನ್ನೋರ್ ಹಾಗೂ ಚೆನ್ನೈ ಬಂದರುಗಳಿಂದ ಅದಿರು ಸಾಗಾಟ ಪ್ರಕರಣಗಳ ತನಿಖೆಯನ್ನ ಲೋಕಾಯುಕ್ತ ಎಸ್ಐಟಿ ನಡೆಸಬೇಕಿದೆ. ಈ ಹಿಂದೆ ಈ ಎಲ್ಲಾ ಪ್ರಕರಣಗಳ ಕುರಿತಾಗಿ ಸಿಬಿಐ ಪ್ರಾಥಮಿಕ ತನಿಖೆ ನಡೆಸಿತ್ತು. ಆದರೆ, ಈ ಪ್ರಕರಣಗಳನ್ನು ರಿಜಿಸ್ಟರ್ಡ್ ಕೇಸ್ಗಳಾಗಿ ಪರಿವರ್ತಿಸಲು ವಿಫಲವಾಗಿತ್ತು.
ಹಾಗೆ ನೋಡಿದರೆ ರಾಜ್ಯಾದ್ಯಂತ ಅಕ್ರಮ ಅದಿರು ಸಾಗಾಟದ ಒಟ್ಟು 9 ಪ್ರಕರಣಗಳು ಬೆಳಕಿಗೆ ಬಂದಿದ್ದವು. ಈ ಎಲ್ಲಾ ಪ್ರಕರಣಗಳ ತನಿಖೆಯನ್ನು ಸಿಬಿಐಗೆ ವಹಿಸಲಾಗಿತ್ತು. ಆದರೆ ಸಿಬಿಐ ಈ ಪೈಕಿ ಕೇವಲ 3 ಪ್ರಕರಣಗಳ ತನಿಖೆಯನ್ನ ಮಾತ್ರ ಕೈಗೆತ್ತಿಕೊಂಡಿದೆ. ಆಂಧ್ರ ಪ್ರದೇಶದ ಕೃಷ್ಣ ಪಟ್ಟಣಂ, ಕಾಕಿನಾಡ ಹಾಗೂ ವಿಶಾಖಪಟ್ಟಣಂ ಬಂದರುಗಳಿಂದ ಅದಿರು ಸಾಗಾಟ ಮಾಡಲಾಗಿದ್ದ ಪ್ರಕರಣ ಸಂಬಂಧ ಸಿಬಿಐ ಎಫ್ಐಆರ್ ದಾಖಲಿಸಿದೆ. ಈ ಎಲ್ಲಾ ಮೂರು ಪ್ರಕರಣಗಳ ಪೈಕಿ ಯಾವುದೇ ಪ್ರಕರಣದಲ್ಲೂ ಸಿಬಿಐ ಈವರೆಗೆ ಚಾರ್ಚ್ ಶೀಟ್ ಸಲ್ಲಿಸಿಲ್ಲ. ಜೊತೆಯಲ್ಲೇ ಇನ್ನುಳಿದ 6 ಪ್ರಕರಣಗಳ ತನಿಖೆಯನ್ನ ಕೈಗೆತ್ತಿಕೊಳ್ಳಲು ಸಿಬಿಐ ನಿರಾಕರಿಸಿತ್ತು. ಇದೀಗ 6 ಪ್ರಕರಣಗಳ ತನಿಖೆ ಹೊಣೆ ಲೋಕಾಯುಕ್ತ ಎಸ್ಐಟಿ ಹೆಗಲೇರಿದೆ.
10 ಕಂಪನಿಗಳಿಗೆ ಸಿದ್ದು ಸರ್ಕಾರದ ಶಾಕ್!
ಅಕ್ರಮ ಗಣಿಗಾರಿಕೆ ಕುರಿತಾಗಿ ಹತ್ತು ಕಂಪನಿಗಳಿಗೆ ಸಿ ಪ್ರವರ್ಗ ಗಣಿ ಗುತ್ತಿಗೆ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಲು ಲೋಕಾಯುಕ್ತ ಎಸ್ ಐ ಟಿ ಗೆ ವಹಿಸಲು ಕರ್ನಾಟಕ ರಾಜ್ಯ ಸರ್ಕಾರದ ಸಂಪುಟ ನಿರ್ಧಾರ ಮಾಡಿದೆ. ಗುರುವಾರ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಆ ಕಂಪನಿಗಳು ಇಂತಿವೆ.
1 – ಮೈಸೂರು ಮ್ಯಾಂಗನೀಸ್ ಕಂಪನಿ
2 – ಎಂ ದಶರಥಾ ರಾಮೇರೆಡ್ಡಿ ಕಂಪನಿ
3 – ಅಲ್ಲಂ ವೀರಭದ್ರಪ್ಪ ಗಣಿ ಕಂಪನಿ
4 – ಕರ್ನಾಟಕ ಲಿಂಪೋ ಗಣಿ ಕಂಪನಿ
5 – ಅಂಜನಾ ಮಿನರಲ್ಸ್
6 – ರಝಯ್ಯಾ ಖಾನಂ ಗಣಿ ಕಂಪನಿ
7 – ಮಿಲನಾ ಮಿನರಲ್ಸ್ ಕಂಪನಿ
8 – ಎಂ ಶ್ರೀನಿವಾಸುಲು ಕಂಪನಿ
9 – ಚನ್ನಕೇಶವ ರೆಡ್ಡಿ ಲಕ್ಷ್ಮಿ ನರಸಿಂಹ ಮೈನಿಂಗ್ ಕಂಪನಿ
10 – ಜಿ ರಾಜಶೇಖರ್ ಕಂಪನಿ