ಮುಂಬೈ: ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಕಂಪ್ಯೂಟರ್ ಆಪರೇಟರ್ ಓರ್ವ ಸರ್ಕಾರದ ಖಜಾನೆಗೆ ಖನ್ನ ಹಾಕಿ, ಬರೋಬ್ಬರಿ 21 ಕೋಟಿ ರೂಪಾಯಿ ದೋಚಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಮಹಾರಾಷ್ಟ್ರದ ಸರ್ಕಾರಿ ಸ್ವಾಮ್ಯದ ಕ್ರೀಡಾ ಸಂಕೀರ್ಣದಲ್ಲಿ 13,000 ರೂಪಾಯಿ ಮಾಸಿಕ ಸಂಬಳಕ್ಕೆ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ಯುವಕ ಕದ್ದ ಹಣದಲ್ಲಿ ತನ್ನ ಗೆಳತಿಗೆ ಐಷಾರಾಮಿ ಕಾರು ಹಾಗೂ 4 ಬಿಎಚ್ಕೆ ಫ್ಲ್ಯಾಟ್ ಗಿಫ್ಟ್ ಮಾಡಿದ್ದಾನೆ.
ಹೌದು! ಛತ್ರಪತಿ ಸಂಭಾಜಿ ನಗರದಲ್ಲಿರುವ ವಿಭಾಗೀಯ ಕ್ರೀಡಾ ಸಂಕೀರ್ಣದ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿಯಾಗಿ 23 ವರ್ಷದ ಹರ್ಷಲ್ ಕುಮಾರ್ ಕ್ಷೀರಸಾಗರ್ ಕೆಲಸ ಮಾಡಿಕೊಂಡಿದ್ದ. ಕ್ರೀಡಾ ಸಂಕೀರ್ಣದ ಹಳೆಯ ಲೆಟರ್ಹೆಡ್ಅನ್ನು ಬಳಸಿ, ಕ್ರೀಡಾ ಸಂಕೀರ್ಣದ ಖಾತೆಗೆ ಲಿಂಕ್ ಮಾಡಲಾದ ಇಮೇಲ್ ವಿಳಾಸದಲ್ಲಿ ಬದಲಾವಣೆ ಆಗಬೇಕಿದೆ ಎಂದು ಬ್ಯಾಂಕ್ಗೆ ಈ ಮೇಲ್ ಮಾಡಿದ್ದರು. ಕ್ರೀಡಾ ಸಂಕೀರ್ಣದ ಖಾತೆಯನ್ನು ಹೋಲುವ ವಿಳಾಸದೊಂದಿಗೆ ಅವರು ಹೊಸ ಇಮೇಲ್ ಖಾತೆಯನ್ನು ತೆರೆದಿದ್ದು, ಕೇವಲ ಒಂದು ಅಕ್ಷರವನ್ನು ಮಾತ್ರವೇ ಆತ ಬದಲಾವಣೆ ಮಾಡಿದ್ದಾನೆ. ಈ ಇಮೇಲ್ ವಿಳಾಸವನ್ನು ಈಗ ಕ್ರೀಡಾ ಸಂಕೀರ್ಣದ ಬ್ಯಾಂಕ್ ಖಾತೆಗೆ ಲಿಂಕ್ ಮಾಡಲಾಗಿತ್ತು. ಇದರಿಂದಾಗಿ ಈ ಖಾತೆಗೆ ಸಂಬಂಧಿಸಿದ್ದ ಒಟಿಪಿ ಹಾಗೂ ಇತರ ವಹಿವಾಟುಗಳಿಗೆ ಆತನಿಗೆ ಸುಲಭವಾಗಿ ಪ್ರವೇಶಿಸುವ ಮಾರ್ಗ ಸಿಕ್ಕಂತಾಗಿತ್ತು.
ಹರ್ಷಲ್ ಇಂಟರ್ನೆಟ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ವಿಭಾಗೀಯ ಕ್ರೀಡಾ ಸಂಕೀರ್ಣ ಸಮಿತಿಯ ಬ್ಯಾಂಕ್ ಅಕೌಂಟ್ಗೆ ಪಡೆದುಕೊಂಡಿದ್ದ. ಜುಲೈ 1 ರಿಂದ ಡಿಸೆಂಬರ್ 7ರವರೆಗಿನ ಅವಧಿಯಲ್ಲಿ ಈ ಅಕೌಂಟ್ನಲ್ಲಿ 21.6 ಕೋಟಿ ರೂಪಾಯಿ ಹಣವನ್ನು ವಿವಿಧ 13 ಬ್ಯಾಂಕ್ ಅಕೌಂಟ್ಗಳಿಗೆ ವರ್ಗಾವಣೆ ಮಾಡಿದ್ದಾನೆ. ಇದೇ ಹಣದಲ್ಲಿ ಈತ 1.2 ಕೋಟಿ ರೂಪಾಯಿ ಮೌಲ್ಯದ ಬಿಎಂಡಬ್ಲ್ಯು ಕಾರ್, 1.3 ಕೋಟಿ ರೂಪಾಯಿ ಮೊತ್ತದ ಎಸ್ಯುವಿ, 32 ಲಕ್ಷ ರೂಪಾಯಿಯ ಬಿಎಂಡಬ್ಲ್ಯು ಬೈಕ್ ಕೂಡ ಖರೀದಿ ಮಾಡಿದ್ದಾನೆ. ಅದರೊಂದಿಗೆ ಹರ್ಷಲ್ ತನ್ನ ಗೆಳತಿಗೆ ಛತ್ರಪತಿ ಸಂಭಾಜಿನಗರ ವಿಮಾನ ನಿಲ್ದಾಣದ ಬಳಿ 4 BHK ಫ್ಲಾಟ್ ಅನ್ನು ಉಡುಗೊರೆಯಾಗಿ ನೀಡಿದ್ದಾನೆ. ಆತ ತನ್ನ ಗೆಳತಿಗಾಗಿ ವಜ್ರಲೇಪಿತ ಕನ್ನಡಕವನ್ನು ಸಹ ಆರ್ಡರ್ ಮಾಡಿದ್ದು, ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಈ ಭಾರಿ ವಂಚನೆಯಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದು, ಈಗ ಹಣ ದೋಚಲು ಬಳಸಿದ ಬ್ಯಾಂಕ್ ಖಾತೆಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಹರ್ಷಲ್ನನ್ನು ಬಂಧಿಸಲು ಪೊಲೀಸರು ಶೋಧ ನಡೆಸುತ್ತಿದ್ದು, ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಕ್ರೀಡಾ ಇಲಾಖೆಯ ಅಧಿಕಾರಿಯೊಬ್ಬರು ಹಣಕಾಸಿನ ಅವ್ಯವಹಾರವನ್ನು ಗಮನಿಸಿ ದೂರು ದಾಖಲಿಸಿದಾಗ ವಿಷಯ ಬೆಳಕಿಗೆ ಬಂದಿದ್ದು, ಹರ್ಷಲ್ ಗೆ ಬೆಂಬಲ ನೀಡಿದ ಆರೋಪದ ಮೇಲೆ ಆತನ ಸಹೋದ್ಯೋಗಿ ಯಶೋಧಾ ಶೆಟ್ಟಿ ಮತ್ತು ಆಕೆಯ ಪತಿ ಬಿಕೆ ಜೀವನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.