ದೆಹಲಿ: ಪಂಚಮಸಾಲಿ ಸಮುದಾಯದವರು 2 ಎ ಮೀಸಲಾತಿಗಾಗಿ ನಡೆಸುತ್ತಿದ್ದ ಶಾಂತಿಯುತ ಪ್ರತಿಭಟನೆ ಮೇಲೆ ರಾಜ್ಯ ಸರ್ಕಾರ ಪೋಲಿಸರ ಮೂಲಕ ಲಾಠಿಚಾರ್ಜ್ ಮಾಡಿಸುವ ಮೂಲಕ ಕ್ಷಮಿಸಲಾರದ ತಪ್ಪು ಮಾಡಿದ್ದು, ಇದಕ್ಕೆ ಬೆಲೆ ತೆರಬೇಕಾಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ನವ ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಜನ ವಿರೋಧಿ ಸರ್ಕಾರ ಅಂತ ಮತ್ತೆ ಮತ್ತೆ ಸಾಬೀತು ಮಾಡುತ್ತಿದೆ. ವಿಶೇಷವಾಗಿ ರೈತರ ವಿರುದ್ದ ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಕಾಲಕಾಲಕ್ಕೆ ಪ್ರವಾಹ, ಬರಗಾಲದ ಪರಿಹಾರ ಕೊಟ್ಟಿಲ್ಲ,
ನಾವು ಜಾರಿ ತಂದ ಯೋಜನೆಗಳಿಗೆ ತಿಲಾಂಜಲಿ ಇಟ್ಟಿದ್ದಾರೆ. ರಾಜ್ಯ ಸರ್ಕಾರ ನೀಡುತ್ತಿದ್ದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಸ್ಥಗಿತಗೊಳಿಸಿದ್ದಾರೆ. ನಾನು ಸಿಎಂ ಆಗಿದ್ದಾಗ ರೈತರ ಮಕ್ಕಳಿಗಾಗಿ ಜಾರಿಗೆ ತಂದಿದ್ದ ರೈತ ವಿದ್ಯಾನಿಧಿ ಯೋಜನೆ ನಿಲ್ಲಿಸಿದ್ದಾರೆ. ಒಂದು ರೀತಿಯಲ್ಲಿ ರೈತ ವಿರೋಧಿ ಮತ್ತು ಜನ ವಿರೋಧಿ ಸರ್ಕಾರ ಇದಾಗಿದೆ ಎಂದು ವಾಗ್ದಾಳಿ ನಡೆಸಿದರು.
ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ಮುಖ್ಯಮಂತ್ರಿಗಳು ಅದೇ ಹಿಂದುಳಿದ ವರ್ಗ ಹೆಚ್ಚಿನ ಮೀಸಲಾತಿ ಕೇಳುತ್ತಿರುವ ಸಂದರ್ಭದಲ್ಲಿ ಸಮಾಧಾನದಿಂದ ನ್ಯಾಯಸಮ್ಮತ ತೀರ್ಮಾನ ಮಾಡಬೇಕಿತ್ತು. ಪಂಚಮಸಾಲಿ ಪೀಠದ ಸ್ವಾಮೀಜಿವರು ತಮ್ಮನ್ನು ಸರ್ಕಾರ ನಿರ್ಲಕ್ಷ್ಯ ಮಾಡುತ್ತಿದೆ ಎಂದು ಪದೇ ಪದೇ ಹೇಳುತ್ತಿದ್ದಾರೆ. ಈಗ ಪ್ರತಿಭಟನೆ ಮಾಡುವವರ ಮೇಲೆ ಲಾಠಿ ಚಾರ್ಜ್ ಮಾಡಿ ರಕ್ತ ಬರುವಂತೆ ಮಾಡಿದ್ದು, ಕ್ಷಮಿಸಲಾರದಂತಹ ಅಪರಾಧ, ಇದಕ್ಕೆ ರಾಜ್ಯ ಸರ್ಕಾರ ತಕ್ಕ ಬೆಲೆ ತೆರಬೇಕಾಗುತ್ತದೆ. ಪೋಲಿಸ್ ಆಡಳಿತ, ದೌರ್ಜನ್ಯ ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು.
ಓಲೈಕೆ ರಾಜಕಾರಣ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಫಿಡವಿಟ್ ಬಗ್ಗೆ ಮಾತನಾಡಿದ್ದಾರೆ. ಮೀಸಲಾತಿ ಹೆಚ್ಚಳದ ಬಗ್ಗೆ ನಾವೇ ಆದೇಶ ಮಾಡಿದ್ದೇವೆ. ವೀರಶೈವ ಲಿಂಗಾಯತ ಸಮುದಾಯದ ಮೀಸಲಾತಿ 5% ರಿಂದ 7 ಕ್ಕೆ ಹೆಚ್ಚಿಸಿದ್ದೇವೆ. ಒಕ್ಕಲಿಗ ಸಮುದಾಯದ ಮೀಸಲಾತಿಯನ್ನು 4%.ರಿಂದ 6% ಕ್ಕೆ ಹೆಚ್ಚಳ ಮಾಡಿದ್ದೇವೆ. ನಾವೇ ಆದೇಶ ಮಾಡಿ, ನಾವೇ ಯಾಕೆ ತಡೆಯಾಜ್ಞೆ ತರುತ್ತೇವೆ. ಸಿದ್ದರಾಮಯ್ಯ ಅವರ ಬೆಂಬಲಿಗರೇ ಹಿನ್ನೆಲೆಯಲ್ಲಿ ನಿಂತು ಕೋರ್ಟ್ ಗೆ ಹೋದವರು. ಆಗ ನಾವು ಪೂರ್ಣ ವಾದ ಮಾಡಲು ಸಿದ್ದರಿದ್ದೇವೆ ಎಂದು ಹೇಳಿದ್ದೇವು. ಆಗ ಸುಪ್ರೀಂ ಕೋರ್ಟ್ ಇದನ್ನು ಸಂಪೂರ್ಣ ವಾದ ಆಲಿಸಿ ತೀರ್ಪು ಕೊಡುತ್ತೇವೆ. ಅಲ್ಲಿಯವರೆಗೂ ರಾಜ್ಯ ಸರ್ಕಾರ ಈ ಆದೇಶ ಜಾರಿ ಮಾಡಬಾರದು ಅಂತ ಹೇಳಿತ್ತು. ನಾವು ಮುಂದಿನ ವಿಚಾರಣೆವರೆಗೂ ನಾವು ಈ ಆದೇಶ ಜಾರಿ ಮಾಡುವುದಿಲ್ಲ ಎಂದು ಹೇಳಿದ್ದೇವು. ಅದು ಬಿಟ್ಟು ನಾವು ಶಾಸ್ವತವಾಗಿ ನಮ್ಮ ಆದೇಶ ಹಿಂಪಡೆಯುತ್ತೇವೆ ಅಂತ ಹೇಳಿರಲಿಲ್ಲ. ಇದೆಲ್ಲ ಗೊತ್ತಿದ್ದರೂ ಮುಖ್ಯಮಂತ್ರಿಗಳು ವಿಧಾನಸಭೆಯಲ್ಲಿ ಸುಪ್ರೀಂ ಕೋರ್ಟ್ ಆದೇಶದ ಪ್ರತಿ ಓದುತ್ತೇನೆ ಅಂತ ಹೇಳಿದ್ದಾರೆ.
ಆದರೆ, ಸುಪ್ರೀಂ ಕೋರ್ಟ್ ಆದೇಶವನ್ನೇ ಮಾಡಿಲ್ಲ. 2023 ರ ಜೂನ್ ತಿಂಗಳಲ್ಲಿ ವಿಚಾರಣೆ ಮುಂದೂಡಿದ್ದರು. ಈ ಸರ್ಕಾರಕ್ಕೆ ಕಾಳಜಿ ಇಲ್ಲ. ಈ ಸರ್ಕಾರ ಓಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದೆ. ಈ ಸರ್ಕಾರದ ನಿಲುವು ಏನು ಅಂತ ಕೂಡ ಹೇಳುತ್ತಿಲ್ಲ ಎಂದು ಆರೋಪಿಸಿದರು.
ನಾವು ಮುಂದಿನ ವಿಚಾರಣೆವರೆಗೆ ಮಾತ್ರ ಅಂತ ಸ್ಪಷ್ಟವಾಗಿ ಹೇಳಿದ್ದೇವೆ. ಇವರು ಓಲೈಕೆ ರಾಜಕಾರಣ ಮಾಡಲು ಪಂಚಮಸಾಲಿ ಸಮುದಾಯದ ನ್ಯಾಯಯುತ ಬೇಡಿಕೆಗೆ ಅನ್ಯಾಯ ಮಾಡುತ್ತಿದೆ. ಇದನ್ನು ಪ್ರತಿಪಕ್ಷಗಳು ಈಗಾಗಲೇ ಹೇಳಿವೆ. ಮುಖ್ಯಮಂತ್ರಿಗಳು ನಾವು ಸಲ್ಲಿಸಿದ್ದ ಅಫಿಡವಿಟನ್ನು ಪೂರ್ಣಪ್ರಮಾಣದಲ್ಲಿ ಸರಿಯಾದ ಅರ್ಥದಲ್ಲಿ ಓದಿದರೆ ಬಹಳ ಸ್ಪಷ್ಟವಾಗುತ್ತದೆ. ದಾರಿ ತಪ್ಪಿಸುವ ಕೆಲಸ ಆಗಬಾರದು ಎಂದು ಹೇಳಿದರು.