ಬಾರ್ಡರ್-ಗವಾಸ್ಕರ್ ಟ್ರೋಫಿಯ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ತಂಡಕ್ಕೆ ದಿಟ್ಟ ಉತ್ತರ ನೀಡಿದೆ. ನಾಯಕ ಜಸ್ಪ್ರೀತ್ ಬುಮ್ರಾ ಅವರ ಮಾರಕ ದಾಳಿಗೆ ಆಸಿಸ್ ಪಡೆ ತತ್ತರಿಸಿ ಹೋಗಿದೆ. ಮೊದಲ ದಿನದಾಟದಲ್ಲಿ ಒಟ್ಟು 17 ವಿಕೆಟ್ ಪತನ ಆಗಿರೋದು ವಿಶೇಷವಾಗಿದೆ. ಪರ್ತ್ ಅಂಗಳದಲ್ಲಿ ಟಾಸ್ ಗೆದ್ದ ಜಸ್ಪ್ರೀತ್ ಬುಮ್ರಾ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದ್ದರು. ಮೊದಲ ದಿನದ ಎರಡನೇ ಸೆಷನ್ನಲ್ಲೇ ಭಾರತ ತಂಡ ಕೇವಲ 150 ರನ್ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಆಸ್ಟ್ರೇಲಿಯಾಗೆ ತಲೆಬಾಗಿತ್ತು.
ಬ್ಯಾಟಿಂಗ್ನಲ್ಲಿ ಹಿನ್ನಡೆ ಅನುಭವಿಸಿದ ಬೂಮ್ರಾ ಪಡೆ, 150 ರನ್ಗಳಿಗೆ ಆಲೌಟ್ ಆಯಿತು. ಜೈಸ್ವಾಲ್ ಹಾಗೂ ಪಡಿಕ್ಕಲ್ ಸೊನ್ನೆ ಸುತ್ತಿದರು. ಕೊಹ್ಲಿ, ವಾಷಿಂಗ್ಟನ್ ಸುಂದರ್, ಹರ್ಷಿತ್ ರಾಣಾ, ಬೂಮ್ರಾ ಕ್ರಮವಾಗಿ 5, 4, 7, 8 ರನ್ಗಳಿಗೆ ಸುಸ್ತಾದರು. ಕೆ.ಎಲ್ ರಾಹುಲ್, ರಿಷಬ್ ಪಂತ್, ನಿತೀಶ್ ರೆಡ್ಡಿ ಭರವಸೆ ಮೂಡಿಸಿ ನಿರಾಸೆ ಮೂಡಿಸಿದರು. ರಾಹುಲ್ 26 ರನ್ಗಳಿಗೆ ಔಟ್ ಆದರೆ, ರಿಷಬ್ ಪಂತ್ 37 ಹಾಗೂ ನಿತಿಶ್ ಕುಮಾರ್ ರೆಡ್ಡಿ 41 ರನ್ಗಳಿಗೆ ಔಟ್ ಆದರು. ಧ್ರುವ್ ಜುರೇಲ್ 11 ರನ್ಗಳಿಸಿದರು. ಆಸಿಸ್ ಬೌಲರ್ಸ್ ಬಿಟ್ಟಿಯಾಗಿ 11 ರನ್ಗಳನ್ನು ನೀಡಿದ ಪರಿಣಾಮ ಭಾರತ ತಂಡ 150 ರನ್ಗಳಿಸಲು ಸಾಧ್ಯವಾಯಿತು.
ಟೀಂ ಇಂಡಿಯಾ ದಾಳಿಗೆ ಆಸಿಸ್ ತತ್ತರ!
ಬ್ಯಾಟಿಂಗ್ನಲ್ಲಿ ಪರದಾಡಿದ ಟೀಂ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾವನ್ನು ಕಟ್ಟಿ ಹಾಕುವಲ್ಲಿ ಯಶಸ್ವಿಯಾಗಿದೆ. ಮೊದಲ ದಿನವೇ ಮಾರಕ ಬೌಲಿಂಗ್ ಪ್ರದರ್ಶಿಸಿದ ಭಾರತ, ಆಸ್ಟ್ರೇಲಿಯಾದ 7 ವಿಕೆಟ್ಗಳನ್ನು ಕಬಳಿಸಿದೆ.
ನಾಯಕ ಜಸ್ಪ್ರೀತ್ ಬುಮ್ರಾ 4 ವಿಕೆಟ್ ಪಡೆಯೋ ಮೂಲಕ ಆಸಿಸ್ ತಂಡ ತತ್ತರಿಸುವಂತೆ ಮಾಡಿದ್ದಾರೆ. ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದ್ದು, ಮೊದಲ ಇನ್ನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡ ಸಂಕಷ್ಟಕ್ಕೆ ಸಿಲುಕಿದೆ.