ನವದೆಹಲಿ: ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಸೇರಿದಂತೆ 8 ಜನರ ವಿರುದ್ಧ ಶತಕೋಟಿ ಡಾಲರ್ ವಂಚನೆ ಮತ್ತು ಲಂಚದ ಆರೋಪವನ್ನು ಅಮೆರಿಕದ ನ್ಯೂಯಾರ್ಕ್ ಫೆಡರಲ್ ಕೋರ್ಟ್ ಮಾಡಿದೆ. ಭಾರತದಲ್ಲಿ ಸೌರಶಕ್ತಿಗೆ ಸಂಬಂಧಿಸಿದ ಒಪ್ಪಂದವನ್ನು ಪಡೆಯಲು ಭಾರತೀಯ ಅಧಿಕಾರಿಗಳಿಗೆ ಸುಮಾರು 2110 ಕೋಟಿ ರೂಪಾಯಿ ($250 ಮಿಲಿಯನ್) ಲಂಚದ ಆಮಿಷ ನೀಡಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಅಟಾರ್ನಿ ಕಚೇರಿ ಆರೋಪಿಸಿದೆ.
ಅಮೆರಿಕ ನ್ಯಾಯಾಂಗ ಇಲಾಖೆ ಆರೋಪ ಪಟ್ಟಿಯಲ್ಲಿರುವ ಆರೋಪಗಳು ಸಾಬೀತಾಗುವವರೆಗೂ ಅವರನ್ನು ನಿರ್ದೋಷಿಗಳೆಂದು ಪರಿಗಣಿಸಲಾಗುವುದು ಹೇಳಿದೆ. ಈ ಪ್ರಕರಣಕ್ಕೆ ಸಾಧ್ಯವಿರುವ ಎಲ್ಲಾ ಕಾನೂನು ಹೋರಾಟ ಮಾಡಲಾಗುವುದು.
ಅದಾನಿ ಕಂಪನಿ ಮೇಲೆ ಬಂದಿರುವ ಆರೋಪಗಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅದಾನಿ ಗ್ರೂಪ್ ವಕ್ತಾರರು, ’ಅದಾನಿ ಗ್ರೀನ್ನ ನಿರ್ದೇಶಕರ ವಿರುದ್ಧ ಯುಎಸ್ ಡಿಪಾರ್ಟ್ಮೆಂಟ್ ಆಫ್ ಜಸ್ಟೀಸ್ ಮತ್ತು ಯುಎಸ್ ಸೆಕ್ಯುರಿಟೀಸ್ ಮತ್ತು ಎಕ್ಸ್ಚೇಂಜ್ ಕಮಿಷನ್ ಮಾಡಿರುವ ಆರೋಪಗಳು ಆಧಾರರಹಿತವಾಗಿವೆ ಮತ್ತು ಈ ಆರೋಪಗಳನ್ನು ಕಂಪನಿ ಬಲವಾಗಿ ನಿರಾಕರಿಸುತ್ತದೆ.’ ಎಂದು ಹೇಳಿದೆ.
ಅದಾನಿ ಗ್ರೂಪ್ ಯಾವಾಗಲೂ ಕಾರ್ಯಾಚರಣೆಗಳ ಎಲ್ಲಾ ನ್ಯಾಯವ್ಯಾಪ್ತಿಯಲ್ಲಿ ಆಡಳಿತ, ಪಾರದರ್ಶಕತೆ ಮತ್ತು ನಿಯಂತ್ರಕ ಅನುಸರಣೆಯ ಉನ್ನತ ಗುಣಮಟ್ಟವನ್ನು ಕಾಪಾಡಿಕೊಳ್ಳಲು ದೃಢವಾಗಿ ಬದ್ಧವಾಗಿದೆ. ನಾವು ಕಾನೂನು-ಪಾಲಿಸುವ ಸಂಸ್ಥೆಯಾಗಿದ್ದು, ಎಲ್ಲಾ ಕಾನೂನುಗಳಿಗೆ ಸಂಪೂರ್ಣವಾಗಿ ಪಾಲಿಸುತ್ತೇವೆ ಎಂದು ನಾವು ನಮ್ಮ ಮಧ್ಯಸ್ಥಗಾರರು, ಪಾಲುದಾರರು ಮತ್ತು ಉದ್ಯೋಗಿಗಳಿಗೆ ನಾವು ಭರವಸೆ ನೀಡುತ್ತೇವೆ ಎಂದು ಅದಾನಿ ಸಮೂಹದ ಪರವಾಗಿ ವಕ್ತಾರರು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿದ್ದಾರೆ.
ಅಮೆರಿಕದಲ್ಲಿ ಅದಾನಿ ಗ್ರೀನ್ ಎನರ್ಜಿ 6,000 ಮಿಲಿಯನ್ ಅಮೆರಿಕನ್ ಡಾಲರ್ ಬಾಂಡ್ ಬಿಡುಗಡೆ ಮಾಡಿ ಹೂಡಿಕೆ ಸಂಗ್ರಹಿಸಲು ಮುಂದಾಗಿತ್ತು. ಈ ಸಂದರ್ಭದಲ್ಲೇ ಅಮೆರಿಕದ ನ್ಯಾಯಾಂಗ ಇಲಾಖೆ ಲಂಚದ ಆರೋಪ ಮಾಡಿದೆ. ಈ ಬೆನ್ನಲ್ಲೇ ಅಮೆರಿಕನ್ ಡಾಲರ್ ಬಾಂಡ್ ಬಿಡುಗಡೆ ಮಾಡಿ ಹೂಡಿಕೆ ಆಕರ್ಷಿಸಲು ಮುಂದಾಗಿದ್ದ ಅದಾನಿ ಗ್ರೀನ್ ಎನರ್ಜಿ ಕಂಪನಿಯು ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.