ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಲಕ್ನೋ ಸೂಪರ್ ಜೈಂಟ್ಸ್ 21 ರನ್ಗಳ ಜಯ ಸಾಧಿಸಿತು. ತವರಿನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿಕೊಂಡ ಲಖನೌ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಪಂಜಾಬ್ ಕಿಂಗ್ಸ್ ವಿರುದ್ಧ ಇಂಜುರಿಯಿಂದ ಚೇತರಿಸಿಕೊಂಡು ಇಂಪಾಕ್ಟ್ ಪ್ಲೇಯರ್ ಬ್ಯಾಟಿಂಗ್ ಇಳಿದರೂ ಕೆಎಲ್ ರಾಹುಲ್ ಅಬ್ಬರಿಸಲು ಸಾಧ್ಯವಾಗಲಿಲ್ಲ. ಇತ್ತ ಕ್ವಿಂಟನ್ ಡಿಕಾಕ್ , ನಾಯಕ ನಿಕೋಲಸ್ ಪೂರನ್ ಹಾಗೂ ಕ್ರುನಾಲ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ನಿಂದ ಲಖನೌ ಸೂಪರ್ ಜೈಂಟ್ಸ್ 8 ವಿಕೆಟ್ ನಷ್ಟಕ್ಕೆ199 ರನ್ ಸಿಡಿಸಿದರು.
200 ರನ್ಗಳ ಗುರಿಯನ್ನು ಬೆನ್ನತ್ತಿದ ಪಂಜಾಬ್ ಒಂದು ಹಂತದಲ್ಲಿ ಸುಲಭ ಗೆಲುವಿನ ನಿರೀಕ್ಷೆಯಲ್ಲಿತ್ತು. ಮೊದಲ ವಿಕೆಟ್ಗೆ ಜಾನಿ ಬೈರಿಸ್ಟೋ ಮತ್ತು ನಾಯಕ ಶಿಖರ್ ಧವನ್ 11.8 ಓವರ್ ಗಳಲ್ಲಿ 109 ರನ್ ಕಲೆಹಾಕಿದರು. ಈ ಹಂತದಲ್ಲಿ ದಾಳಿಗೆ ಇಳಿದ ಮಯಾಂಕ್ ಯಾದವ್ ಜಾನಿ ಬೈರಿಸ್ಟೋ ವಿಕೆಟ್ ಪಡೆದು ಪಂಜಾಬ್ ಓಟಕ್ಕೆ ಅಡ್ಡಿಯಾದರು. ಅದಾದ ಬಳಿಕ ಪ್ರಭ್ಸಿಮ್ರಾನ್ ಸಿಂಗ್, ಜಿತೇಶ್ ಶರ್ಮಾ ಅವರ ವಿಕೆಟ್ ಪಡೆಯುವ ಮೂಲಕ ಮತ್ತೆ ಆಘಾತ ನೀಡಿದರು. ಮೊದಲ ಪಂದ್ಯದಲ್ಲೇ ಅತಿ ವೇಗದ ಬೌಲಿಂಗ್ ಮಾಡಿದ ಮಯಾಂಕ್ ಯಾದವ್ 4 ಓವರ್ ಗಳಲ್ಲಿ ಕೇವಲ 27 ರನ್ ನೀಡಿ 3 ವಿಕೆಟ್ ಪಡೆದು ಮಿಂಚಿದರು.ಇನ್ನುಳಿದ ಆಟಗಾರರ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ ಕಾರಣ ಪಂಜಾಬ್ ತಂಡ ಜಯದ ದಡ ಸೇರಲು ವಿಫಲರಾದರು.