ನವದೆಹಲಿ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಭೀತಿಯಲ್ಲಿರುವ ಭಾರತೀಯ ನಾಗರಿಕರಿಗೆ, ಭಾರತೀಯ ರಾಯಭಾರಿ ಕಚೇರಿಯು ಸುರಕ್ಷತಾ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಭಾರತೀಯ ನಾಗರಿಕರೆ ಶಾಂತವಾಗಿರಿ, ಇಸ್ರೇಲ್ನ ಸ್ಥಳೀಯ ಅಧಿಕಾರಿಗಳು ನೀಡಿರುವ ಸುರಕ್ಷತಾ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಿ ಎಂದು ಸಲಹೆ ನೀಡಿದೆ. ಭಾರತೀಯ ನಾಗರಿಕರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಮತ್ತು ಡಯಾಸ್ಪೊರಾ ಸದಸ್ಯರೊಂದಿಗೆ ರಾಯಭಾರ ಕಚೇರಿಯು ಸಂಪರ್ಕದಲ್ಲಿದ್ದು, ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ರಾಯಭಾರ ಕಚೇರಿಯು ತನ್ನ 24/7 ನಿಮ್ಮ ತುರ್ತು ಸಹಾಯವಾಣಿಯನ್ನು ಸಹ ಒದಗಿಸಿದೆ. ಈಗಾಗಲೇ ಇಸ್ರೇಲ್ ಮೇಲೆ ಇರಾನ್ 100ಕ್ಕೂ ಹೆಚ್ಚು ಡ್ರೋನ್ಗಳ ದಾಳಿ ನಡೆಸಿದ್ದು, ಪರಿಸ್ಥಿತಿ ಕ್ಷಣಕ್ಷಣಕ್ಕೂ ಹದಗೆಡುತ್ತಿದೆ. ಈ ಹಿನ್ನೆಲೆಯಲ್ಲಿ ಭಾರತೀಯ ನಾಗರಿಕರ ಸುರಕ್ಷತೆಗೆ ಕಚೇರಿ ಮಾರ್ಗಸೂಚಿ ಹೊರಡಿಸಿದೆ.