ಜಾಗತಿಕ ಬಾಹ್ಯಾಕಾಶ ಆವಿಷ್ಕಾರಕ್ಕೆ ಮುನ್ನುಡಿ ಬರೆದಿರುವ ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ -ಇಸ್ರೋ, ಗುರುವಾರ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ-3 ನೌಕೆಯನ್ನು ನಭಕ್ಕೆ ಹಾರಿಸುವಲ್ಲಿ ಯಶಸ್ವಿಯಾಗಿದೆ. ಪ್ರೋಬಾ-3 ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಮಿಷನ್ ಆಗಿತ್ತು. ಇಂದು ಸಂಜೆ 4 ಗಂಟೆ 4 ನಿಮಿಷಕ್ಕೆ ಯಶಸ್ವಿಯಾಗಿ ಉಡ್ಡಯನ ನಡೆದಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಬಾಹ್ಯಾಕಾಶ ನಿಲ್ದಾಣದಿಂದ ಪಿಎಸ್ಎಲ್ವಿ ಸಿ59 ರಾಕೆಟ್ ಮೂಲಕ 550 ಕೆಜಿ ತೂಕದ ಪ್ರೋಬಾ 3 ಮಿಷನ್ ನಭಕ್ಕೆ ಹಾರಿಸಲಾಗಿದೆ.
ಉಪಗ್ರಹ ಪ್ರೊಪಲ್ಷನ್ ಸಿಸ್ಟಮ್ನಲ್ಲಿ ಅಸಂಗತತೆ ಪತ್ತೆಯಾದ ಕಾರಣಕ್ಕೆ ಡಿಸೆಂಬರ್ 4 ರಂದು ಸಂಜೆ 4:08 ಕ್ಕೆ ಉಡಾವಣೆ ಮಾಡಬೇಕಿದ್ದನ್ನು ಮುಂದೂಡಿಕೆ ಮಾಡುವ ನಿರ್ಧಾರವನ್ನ ಇಎಸ್ಎ ಮಾಡಿತ್ತು. ಪ್ರೋಬಾ ಇದು ಲ್ಯಾಟಿನ್ ಪದ. ಪ್ರೋಬಾ ಎಂದರೆ ಪ್ರಯತ್ನಿಸೋಣ ಎಂದು ಅರ್ಥ. ಯುರೋಪಿಯನ್ ಸ್ಪೇಸ್ ಏಜೆನ್ಸಿ 9.2 ಕೋಟಿ ರುಪಾಯಿ ವೆಚ್ಚದಲ್ಲಿ ಈ ನೌಕೆಯನ್ನು ಸಿದ್ದಪಡಿಸಿದೆ. 2 ವರ್ಷಗಳ ಕಾಲ ಸೂರ್ಯನ ಅಧ್ಯಯನ ಮಾಡಲಿದೆ. ಈ ಅವಧಿಯಲ್ಲಿ ಸುಮಾರು 6 ಗಂಟೆಗಳ ಕಾಲ ಕೃತಕ ಸೂರ್ಯಗ್ರಹಣವನ್ನ ಉಂಟು ಮಾಡಲಿದೆ. ಭೂಮಿಗೆ ಅತ್ಯಂತ ಸನಿಹದ ಬಿಂದುವಿನಲ್ಲಿ ಅಂದರೆ ಪೆರಿಜೀ, ಭೂಮಿಯಿಂದ 600 ಕಿ.ಮೀ ದೂರದಲ್ಲಿದ್ದರೆ, ಭೂಮಿಯಿಂದ ಅತ್ಯಂತ ದೂರದ ಬಿಂದು ಅಂದರೆ ಅಪೋಜಿ 60, 530 ಕಿಲೋಮೀಟರ್ ದೂರದಲ್ಲಿರಲಿದೆ. ಕಳೆದ 10 ವರ್ಷಕ್ಕಿಂತ ಹೆಚ್ಚಿನ ಕಾಲ ಈ ನೌಕೆಗಾಗಿ ಯುರೋಪ್ನ 40ಕ್ಕೂ ಅಧಿಕ ಕಂಪನಿಗಳು ಕೆಲಸ ಮಾಡಿವೆ. ಇಎಸ್ಎನಲ್ಲಿರುವ 13 ರಾಷ್ಟ್ರಗಳು ಇದಕ್ಕೆ ವೆಚ್ಚ ಮಾಡಿವೆ.
ಪ್ರೋಬಾ-3 ರಾಕೆಟ್ನಲ್ಲಿ 5 ವಿಭಾಗಗಳಿವೆ, 1 ವಿಭಾಗ ಸುಮಾರು 30 ಟನ್ ತೂಕ ಹೊಂದಿದೆ. ಮೋಟಾರುಗಳ ಮೇಲೆ ಸ್ಟ್ರಾಪ್ ಅನ್ನು ಜೋಡಿಸಲಾಗಿದೆ, ಸ್ಟ್ರಾಪ್ 1 ಮೀಟರ್ ವ್ಯಾಸವನ್ನು ಹೊಂದಿರುತ್ತವೆ, ಪ್ರತಿಯೊಂದು ಸ್ಟ್ರಾಪ್ ಗಳಲ್ಲೂ ಸುಮಾರು 12 ಟನ್ಗಳಷ್ಟು ಪ್ರೊಪೆಲ್ಲಂಟ್ ಇರುತ್ತದೆ.