ಬೆಂಗಳೂರು : ಪ್ರೀತಿ ನಿರಾಕರಿಸಿದ ಕಾಲೇಜು ವಿದ್ಯಾರ್ಥಿನಿಯನ್ನು ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ಆರೋಪಿಯನ್ನು ರಕ್ಷಣೆ ಮಾಡಲು ಕಾಣದ ಕೈಗಳು ಪ್ರಯತ್ನಿಸುತ್ತಿವೆ ಎಂದು ಜೆಡಿಎಸ್ ಆರೋಪಿದಸಿದೆ. ಈ ಬಗ್ಗೆ ಪೋಸ್ಟ್ ಮಾಡಿದ್ದು, ಲವ್ ಜಿಹಾದ್ ಮೋಹದ ಪಾಶವನ್ನು ಸಮರ್ಥನೆ ಮಾಡಿಕೊಂಡಿದ್ದ ಇದೇ ಕಾಣದ ಕೈಗಳು, ಈಗ ಹುಬ್ಬಳ್ಳಿ ವಿದ್ಯಾರ್ಥಿನಿ ಕುಮಾರಿ ನೇಹಾ ಹಿರೇಮಠ ಅವರನ್ನು ಹಾಡುಹಗಲೇ ಕಾಲೇಜು ಆವರಣದಲ್ಲಿಯೇ ಬರ್ಬರವಾಗಿ ಕೊಲೆ ಮಾಡಿದ ವಿಕೃತ ಪಾಪಿಯನ್ನು ರಕ್ಷಿಸಲು ಹೊಂಚು ಹಾಕುತ್ತಿವೆ ಎಂದು ದೂರಿದೆ. ಈ ಘಟನೆ ಅತ್ಯಂತ ಆಘಾತಕಾರಿ. ಕಾನೂನು ಸುವ್ಯವಸ್ಥೆ ಹಳಿತಪ್ಪಿದೆ ಎನ್ನುವುದಕ್ಕೆ ಇದೇ ಜ್ವಲಂತ ಉದಾಹರಣೆ. ರಾಜ್ಯ ಕಾಂಗ್ರೆಸ್ ಸರಕಾರದ ಅತಿಯಾದ ತುಷ್ಟೀಕರಣವು ಅಪರಾಧ ಮನೋಭಾವದ ಕಿಡಿಗೇಡಿಗಳಿಗೆ ಅಫೀಮಿನಂತಾಗಿದೆ. ಕೆಲವರಿಗಂತೂ ಈ ನೆಲದ ಕಾನೂನು ಕಟ್ಟಳೆ ಅನ್ವಯ ಆಗುತ್ತಿಲ್ಲವೇನೋ ಎಂಬ ಅನುಮಾನವೂ ಕಾಡುತ್ತಿದೆ. ಈ ಸರಕಾರವೂ ಹಾಗೆಯೇ ವರ್ತಿಸುತ್ತಿದೆ ಎಂದು ಜೆಡಿಎಸ್ ಟೀಕಿಸಿದೆ. ಪ್ರೀತಿ ನಿರಾಕರಿಸಿದ ಕಾರಣಕ್ಕೆ ಜೀವ ತೆಗೆದ ಪರಮ ಪಾಪಿಯನ್ನು ಸುಮ್ಮನೆ ಬಿಡಬಾರದು. ಮುಂದೆ ಇಂತಹ ಘಟನೆಗಳು ನಡೆಯದಂತೆ ಸರಕಾರ ಕಟ್ಟೆಚ್ಚರ ವಹಿಸಬೇಕು ಅಂತ ಒತ್ತಾಯಿಸಲಾಗಿದೆ.