ಆಧುನಿಕ ಆಹಾರ ಶೈಲಿಯಿಂದ ದಿನನಿತ್ಯದ ಬದುಕೇ ಬದಲಾಗಿದೆ. ಸಿಕ್ಕಸಿಕ್ಕ ಆಹಾರ ತಿಂದು ಅನಾರೋಗ್ಯಕ್ಕೆನಾವೇ ಆಹ್ವಾನ ನೀಡುತ್ತಿದ್ದೇವೆ. ಭಾರದಲ್ಲಿ 60-70 ವರ್ಷ ದಾಟುವುದೇ ಸವಾಲಾಗಿ ಹೋಗಿದೆ. ಇನ್ನು 80-90 ವರ್ಷ ದಾಟುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಆದರೆ ಇಲ್ಲೊಬ್ಬ ಹಿರಿಯಜ್ಜ 111 ವರ್ಷ ವಯಸ್ಸಾದ್ರೂ ಆರೋಗ್ಯಕರ ಜೀವನ ನಡೆಸುತ್ತಿದ್ದಾರೆ ಅಂದರೆ ನೀವು ನಂಬಲೇಬೇಕು. ಇವರ ಆರೋಗ್ಯ ಗುಟ್ಟೇನ ಬಗ್ಗೆ ವಿಶ್ವಾದ್ಯಂತ ಚರ್ಚೆ ನಡೆಯುತ್ತಿದೆ, ಕೆಲವರಂತೂ ಸಿಂಪಲ್ ಆಗಿ ‘ಜಸ್ಟ್ ಲಕ್’ ಎಂದು ಹೇಳಿದ್ದಾರೆ.
ಇಡೀ ಜಗತಿನಲ್ಲಿ ಅತಿ ಹೆಚ್ಚು ವರ್ಷ ಜೀವನ ನಡೆಸುತ್ತಿರುವ ಪಟ್ಟಿಯಲ್ಲಿ ಇಂಗ್ಲೆಂಡ್ನ ಜಾನ್ ಆಲ್ಫ್ರೆಡ್ ಟಿನ್ನಿಸ್ವುಡ್ ಸ್ಥಾನ ಪಡೆದಿದ್ದಾರೆ. ಇವರು 1912ರಲ್ಲಿ ಉತ್ತರ ಇಂಗ್ಲೆಂಡ್ನ ರಿಸೈಡ್ನಲ್ಲಿ ಜನಿಸಿದರು. ವೃತ್ತಿಯಲ್ಲಿ ಅಕೌಂಟೆಂಟ್ ಆದ ಇವರು ಅಂಚೆ ಇಲಾಖೆಯಲ್ಲಿ ಸೇವೆ ಮಾಡಿ ನಿವೃತ್ತಿಯಾಗಿದ್ದಾರೆ. ಉದ್ಯೋಗದಿಂದ ನಿವೃತ್ತಿ ಹೊಂದಿಯೇ ಹಾಫ್ ಸೆಂಚುರಿಯಾಗಿದೆ ಎಂದರೆ ಇದಕ್ಕಿಂತ ದೊಡ್ಡ ವಿಶೇಷತೆ ಏನು ಇಲ್ಲ. ಆದರೆ ಜಾನ್ ಆಲ್ಫ್ರೆಡ್ ಮಾತ್ರ ದೀರ್ಘಾಯುಷ್ಯ ಪಡೆದು ಇಂದಿನ ಯುವ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಈ ಮೂಲಕ ವಿಶ್ವದ ಅತೀ ಹಿರಿಯ ವ್ಯಕ್ತಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ .