ಸತೀಶ್ ನೀನಾಸಂ ಹಾಗೂ ರಚಿತಾ ರಾಮ್ ಕಾಂಬಿನೇಷನ್ ನಲ್ಲಿ 2018ರಲ್ಲಿ ಮೂಡಿಬಂದಿದ್ದ ‘ಅಯೋಗ್ಯ’ ಬಾಕ್ಸಾಫೀಸಿನಲ್ಲಿ ಯಶಸ್ಸು ಕಂಡಿತ್ತು. ಈ ಹಿನ್ನೆಲೆಯಲ್ಲಿ ನಿರ್ದೇಶಕ ಮಹೇಶ್ ‘ಅಯೋಗ್ಯ-2’ಗೆ ಮುಂದಾಗಿರುವುದು ಗೊತ್ತೇ ಇದೆ.
ಕಳೆದ ಡಿ.14ಕ್ಕೆ ಚಿತ್ರಕ್ಕೆ ಮುಹೂರ್ತ ನೆರವೇರಿಸಿ, ಮಂಡ್ಯ ಸುತ್ತಮುತ್ತ ಮೊದಲ ಹಂತದ ಚಿತ್ರೀಕರಣ ನಡೆಸಲಾಗಿತ್ತು. ಇದೀಗ ಎರಡನೇ ಹಂತದ ಶೂಟಿಂಗ್ ಪ್ರಾರಂಭವಾಗಿದ್ದು, ಸಾಹಸ ದೃಶ್ಯಗಳು, ನಾಯಕನ ಪರಿಚಯ, ಹಾಡು ಸೇರಿ ಕೆಲ ಮಾತಿನ ಭಾಗದ ಚಿತ್ರೀಕರಣ ನಡೆಸಲು ಚಿತ್ರತಂಡ ಪ್ಲಾನ್ ಮಾಡಿಕೊಂಡಿದೆ.
ಹೀಗಾಗಿ ಬರೋಬ್ಬರಿ 2 ಕೋಟಿ ರೂಪಾಯಿ ವೆಚ್ಚದ ಅದ್ದೂರಿ ಸೆಟ್ ನಿರ್ಮಿಸಲಾಗಿದೆ. ಇಲ್ಲಿ ಸುಮಾರು 20 ದಿನಗಳ ಕಾಲ ಶೂಟಿಂಗ್ ನಡೆಸಲು ನಿರ್ದೇಶಕರು ಯೋಜಿಸಿದ್ದಾರೆ. ಈ ಬಗ್ಗೆ ಮಹೇಶ್ ‘ಈ ಚಿತ್ರ ಎಲ್ಲಿ ಮುಗಿದಿತ್ತೋ, ಅಲ್ಲಿಂದಲೇ ಶುರುವಾಗುತ್ತದೆ. ಎರಡು-ಮೂರು ಹೊಸ ಪಾತ್ರಗಳನ್ನು ಸೃಷ್ಟಿಸಿದ್ದೇವೆ. ಉಳಿದಂತೆ, ಮೊದಲ ಭಾಗದಲ್ಲಿದ್ದ ಪಾತ್ರಗಳೇ ಬಹುತೇಕ ಮುಂದುವರಿಯುತ್ತವೆ.
ಅಯೋಗ್ಯ ಕೊನೆಯಲ್ಲಿ ಗ್ರಾಮ ಪಂಚಾಯ್ತಿ ಸದಸ್ಯನಾಗುವ ಸಿದ್ದೇಗೌಡ ಏನೆಲ್ಲ ಸಮಸ್ಯೆಗಳನ್ನು ಎದುರಿಸುತ್ತಾನೆ ಎಂಬುದು ಈ ಸೀಕ್ವೆಲ್ ಕಥೆ. ಚಿತ್ರವನ್ನು ಕನ್ನಡದಲ್ಲಿ ಮಾಡಿ, ತೆಲುಗು, ತಮಿಳಿಗೆ ಡಬ್ ಮಾಡಲಿದ್ದೇವೆ’ ಎಂದು ಮಾಹಿತಿ ನೀಡುತ್ತಾರೆ. ಎಲ್ಲ ಅಂದುಕೊಂಡಂತಾದರೆ, ಆಗಸ್ಟ್ಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಚಿತ್ರತಂಡದ್ದು. ಸತೀಶ್, ರಚಿತಾ ಜತೆ ಸುಂದರ್ ರಾಜ್, ಶಿವರಾಜ್ ಕೆ.ಆರ್.ಪೇಟೆ, ಅರುಣಾ ಬಾಲರಾಜ್, ಮಂಜು ಪಾವಗಡ ತಾರಾಗಣದಲ್ಲಿದ್ದಾರೆ. ಅರ್ಜುನ್ ಜನ್ಯ ಸಂಗೀತ, ಮಾಸ್ತಿ ಉಪ್ಪಾರಳ್ಳಿ ಸಂಭಾಷಣೆ, ಬಹದ್ದೂರ್ ಚೇತನ್ ಸಾಹಿತ್ಯ, ವಿಶ್ವಜಿತ್ ರಾವ್ ಛಾಯಾಗ್ರಹಣ ಈ ಚಿತ್ರಕ್ಕಿರಲಿದೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc