ಕನ್ನಡ ರಾಪರ್, ನಟ ಚಂದನ್ ಶೆಟ್ಟಿ ಹೊಚ್ಚ ಹೊಸ ಹುರುಪಿನೊಂದಿಗೆ, ಸಾಹಸಮಯವಾಗಿ ಪ್ರಾರಂಭಿಸಿದ್ದಾರೆ. ಬದುಕಿನ ಏರಿಳಿತಗಳಿಂದಾಗಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ನಟ, ಇದೀಗ ಮತ್ತೆ ಗೆಲುವಿನ ಟ್ರ್ಯಾಕ್ಗೆ ಮರಳುತ್ತಿದ್ದಾರೆ.
ಅದರ ಭಾಗವಾಗಿ ವರ್ಕೌಟ್, ಡಯಟ್ ಪ್ರಾರಂಭಿಸಿರುವ ಅವರು, ಇಲ್ಲಸಲ್ಲದ ಚಿಂತೆಗಳ ಜತೆ ಜತೆಗೆ ತೂಕವನ್ನೂ ಇಳಿಸುತ್ತಿದ್ದಾರೆ. ಈ ಬಗ್ಗೆ ಇದೇ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿರುವ ಚಂದನ್ ಶೆಟ್ಟಿ, ‘ಕೆಲ ತಿಂಗಳ ಹಿಂದೆ ನನ್ನ ಜೀವನದಲ್ಲಿ ನಡೆದ ಘಟನೆಗಳಿಂದ ಡಿಪ್ರೆಷನ್ಗೆ ಹೋಗಿದ್ದೆ. ಬಳಿಕ ಜೀವನದಲ್ಲಿ ಚೆನ್ನಾಗಿರಬೇಕು. ಬದುಕು ಬದಲಿಸಿಕೊಳ್ಳಬೇಕು ಅಂತನ್ನಿಸಿತು. ನಮ್ಮ ಕನ್ನಡ ಹಾಡುಗಳನ್ನು ವಿಶ್ವಾದ್ಯಂತ ಜನ ಕೇಳಬೇಕೆಂಬ ಗುರಿ ಇಟ್ಟುಕೊಂಡಿದ್ದವನು ನಾನು. ಇದೀಗ ಆ ಗುರಿಯತ್ತ ಗಮನ ಹರಿಸಿದ್ದೇನೆ’ ಎಂದು ಹೇಳಿಕೊಂಡಿದ್ಧಾರೆ.
10 ಕೆಜಿ ತೂಕ ಇಳಿಕೆ: ನಟನೆಯಲ್ಲಿ ಬಿಜಿಯಾದ ಕಾರಣ ಎರಡು ವರ್ಷಗಳಿಂದ ವರ್ಕೌಟ್ನತ್ತ ಗಮನಹರಿಸಿದ್ದೇನೆ. “ಎಲ್ಲ ಕಾಲೆಳೆಯುತ್ತೆ ಕಾಲ’ ಚಿತ್ರಕ್ಕಾಗಿ ನಾನು ತೂಕ ಹೆಚ್ಚಿಸಿಕೊಳ್ಳಬೇಕಿತ್ತು. ಬಳಿಕ “ಸೂತ್ರಧಾರಿ’ಯ ಪೊಲೀಸ್ ಪಾತ್ರಕ್ಕೆ ತೂಕ ಇಳಿಸಿಕೊಳ್ಳಬೇಕಿತ್ತು.
ಹೀಗಾಗಿ 87 ಕೆಜಿಯಿಂದ 78 ಕೆಜಿಗೆ ಇಳಿಸಿಕೊಂಡೆ. ಕೆಲ ತಿಂಗಳಿನಿಂದ ನನ್ನ ಜೀವನದಲ್ಲಾದ ಕೆಲ ಘಟನೆಗಳಿಂದ ಮತ್ತೆ 85 ಕೆಜಿಗೆ ತೂಕ ಹೆಚ್ಚಿತ್ತು. ಇದೀಗ ಎರಡು ತಿಂಗಳಿನಿಂದ ಪ್ರತಿದಿನ ಡಯಟ್ ಮತ್ತು ವರ್ಕೌಟ್ ಮಾಡುತ್ತಿದ್ದೇನೆ. ಇದೀಗ 75 ಕೆಜಿಗೆ ತೂಕ ಇಳಿಸಿಕೊಂಡಿದ್ದೇನೆ’ ಎನ್ನುವ ಚಂದನ್ಗೆ ಮುಂದಿನ ದಿನಗಳಲ್ಲಿ ಸಿಕ್ಸ್ ಪ್ಯಾಕ್ ಮಾಡುವ ಪ್ಲಾನ್ ಕೂಡ ಇದೆ.
ಚಂದನ್ ಶೆಟ್ಟಿ ಜಿಮ್ ತರಬೇತುದಾರ ಮ್ಯೂಟಂಟ್ ರಘು ಇಬ್ಬರೂ ಬೆಂಗಳೂರಿನಿಂದ ಸ್ಪಿಟಿ ವ್ಯಾಲಿಗೆ 8000 ಕಿಮೀ ರೋಡ್ ಟ್ರಿಪ್ ಹೊರಟಿದ್ದಾರೆ. ‘ಇದು ನನ್ನ ಜೀವನದ ಮೊದಲ ಸುದೀರ್ಘ ರೋಡ್ ಟ್ರಿಪ್.
ಭಾನುವಾರ ಬೆಂಗಳೂರಿನಿಂದ ಕಾರಿನಲ್ಲಿ ಹೊರಟಿದ್ದೇವೆ. ಹೈದರಾಬಾದ್, ನಾಗ್ಪುರ, ಹಿಮಾಚಲ ಪ್ರದೇಶ, ಆಗ್ರಾ, ಚಂಡೀಘಡ ಮೂಲಕ ಸ್ಪಿಟಿ ವ್ಯಾಲಿಗೆ ಹೋಗಿ ಫೆ. 4ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದೇವೆ. ಹಾಗೇ ಪ್ರಯಾಗ್ರಾಜ್ನ ಮಹಾಕುಂಭ ಮೇಳಕ್ಕೆ ಹೋಗುವ ಪ್ಲಾನ್ ಕೂಡ ಇದೆ’ ಎಂದು ರೋಡ್ ಟ್ರಿಪ್ ಬಗ್ಗೆ ಮಾಹಿತಿ ನೀಡುತ್ತಾರೆ ಚಂದನ್.
ಹಾಗಂತ ಅವರು ವರ್ಕೌಟ್, ಡಯಟ್ನಿಂದ ದೂರವಾಗಿಲ್ಲ. ಬದಲಾಗಿ ‘ಹೈವೆಯಲ್ಲೇ ಅಡುಗೆ ಮಾಡಿಕೊಳ್ಳುತ್ತೇವೆ. ರಸ್ತೆಬದಿಯಲ್ಲೇ ರನ್ನಿಂಗ್, ಬರ್ಪೀಸ್, ಸ್ಕ್ಯಾಟ್ಸ್, ಜಂಪಿಂಗ್ ಜ್ಯಾಕ್ಸ್ ಸೇರಿ ಕೆಲ ವರ್ಕೌಟ್ ಮಾಡುತ್ತಿದ್ದೇನೆ. ಮಾನಸಿಕ, ದೈಹಿಕ ಚೇತರಿಕೆಗೆ ಈ ರೋಡ್ ಟ್ರಿಪ್ ಬೇಕಿತ್ತು’ ಎನ್ನುತ್ತಾರೆ.
ಗ್ಯಾರಂಟಿ ನ್ಯೂಸ್ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ: https://whatsapp.com/channel/0029VafyCqRFnSzHn1JWKi1B
ಜೊತೆಯಲ್ಲೇ ಗ್ಯಾರಂಟಿ ನ್ಯೂಸ್ ಸಮುದಾಯವನ್ನು ಸೇರಲು ಈ ಲಿಂಕ್ ಕ್ಲಿಕ್ಕಿಸಿ: https://chat.whatsapp.com/HWayJDSBf9aI06q6jplPgc