ಒಂದಾದ ಮೇಲೊಂದು ಹೃದಯಸ್ಪರ್ಶಿ ಧಾರಾವಾಹಿಗಳ ಮೂಲಕ ಕನ್ನಡ ಪ್ರೇಕ್ಷಕನ ಮನಸೂರೆಗೊಂಡಿರುವ ಕಲರ್ಸ್ ಕನ್ನಡ ವಾಹಿನಿಯು, ಮತ್ತೊಂದು ಹೊಸ ಧಾರಾವಾಹಿಯನ್ನು ಆರಂಭಿಸುತ್ತಿದೆ. ಡಿಸೆಂಬರ್ 23ರಿಂದ ಪ್ರತಿ ರಾತ್ರಿ 8:30ಕ್ಕೆ ಪ್ರಸಾರಗೊಳ್ಳಲಿರುವ ಹೊಸ ಧಾರಾವಾಹಿ ‘ನೂರು ಜನ್ಮಕೂ’ ವಿಭಿನ್ನವಾದ ರೋಚಕ ಕತೆಯನ್ನು ಹೊಂದಿದೆ.
ಮೊದಲ ನೋಟಕ್ಕೆ ‘ನೂರು ಜನ್ಮಕೂ’ ಒಂದು ನವಿರಾದ ಪ್ರೇಮಕತೆ. ಪ್ರತಿಷ್ಠಿತ ಕದಂಬ ವಂಶದ ಉತ್ತರಾಧಿಕಾರಿ ಚಿರಂಜೀವಿ ಹಾಗೂ ಮೈತ್ರಿ ಎಂಬ ಸಾಧಾರಣ ಕುಟುಂಬದ ಹುಡುಗಿಯ ನಡುವಿನ ಪ್ರೇಮದ ಕತೆಯಿದು. ಚಿರಂಜೀವಿ ಅತಿಮಾನುಷ ಶಕ್ತಿಗಳ ಹಿಡಿತಕ್ಕೆ ಸಿಕ್ಕು ನಲುಗುವಾಗ ರಾಘವೇಂದ್ರಸ್ವಾಮಿಯ ಪರಮಭಕ್ತೆಯಾದ ಮೈತ್ರಿ ತನ್ನ ಶ್ರದ್ಧೆ ಹಾಗೂ ನಂಬಿಕೆಗಳ ಮುಖಾಂತರ ಅವನನ್ನು ರಕ್ಷಿಸಲು ಪಣತೊಡುತ್ತಾಳೆ. ಚಿರಂಜೀವಿಯ ಜೀವ ಕಾಪಾಡುತ್ತಲೇ ತಮ್ಮ ಪ್ರೀತಿಯನ್ನೂ ಉಳಿಸಿಕೊಳ್ಳಲು ಒದ್ದಾಡುವ ಹೆಣ್ಣಾಗಿ ಮೈತ್ರಿ ನೋಡುಗರ ಮನಸನ್ನು ಆವರಿಸಿಕೊಳ್ಳುವುದರಲ್ಲಿ ಸಂಶಯವಿಲ್ಲ.
ಧಾರಾವಾಹಿಯ ಕತೆಯನ್ನು ಚಿಕ್ಕಮಗಳೂರಿನ ಚೆಂದದ ತಾಣಗಳಲ್ಲಿ ಚಿತ್ರೀಕರಿಸಲಾಗಿದ್ದು, ‘ನೂರು ಜನ್ಮಕೂ’ ಮಾನವೀಯ ಅಂತಃಕರಣ ಹಾಗೂ ಅತಿಮಾನುಷ ಶಕ್ತಿಗಳ ಅಟ್ಟಹಾಸವನ್ನು ಮುಖಾಮುಖಿಯಾಗಿಸುತ್ತದೆ. ಹಾಗಾಗಿ ರೋಚಕ ತಿರುವುಗಳನ್ನು ಪಡೆಯುತ್ತಾ ವೀಕ್ಷಕರನ್ನು ರಂಜಿಸುತ್ತದೆ. ಸಂಬಂಧಗಳು, ಫ್ಯಾಮಿಲಿ ಡ್ರಾಮಾವನ್ನು ಮತ್ತಷ್ಟು ರಸವತ್ತಾಗಿಸುತ್ತವೆ.
ಶ್ರವಂತ್ ರಾಧಿಕಾ ನಿರ್ದೇಶನದ ಈ ಧಾರಾವಾಹಿಯಲ್ಲಿ ಹೆಸರಾಂತ ನಟನಟಿಯರ ದಂಡೇ ಇದೆ. ‘ಗೀತಾ’ ಧಾರಾವಾಹಿಯಿಂದ ಹೆಸರಾದ ಧನುಷ್ ಗೌಡ, ಹಿರಿಯ ನಟಿ ಗಿರಿಜಾ ಲೋಕೇಶ್, ಭಾಗ್ಯಶ್ರೀ, ಬಿ ಎಂ ವೆಂಕಟೇಶ್ ಮತ್ತು ಗಾಯಕಿ ಅರ್ಚನಾ ಉಡುಪ ಪಾತ್ರವರ್ಗದಲ್ಲಿದ್ದಾರೆ. ಜೊತೆಗೆ ಮಜಾ ಟಾಕೀಸ್ ಖ್ಯಾತಿಯ ರೆಮೋ ಕೂಡ ಇದ್ದಾರೆ. ಚಿತ್ರಾ ಶೆಣೈ ತಮ್ಮ ಗುಡ್ ಕಂಪನಿ ಸಂಸ್ಥೆಯಿಂದ ‘ನೂರು ಜನ್ಮಕೂ’ ಧಾರಾವಾಹಿಯನ್ನು ನಿರ್ಮಿಸುತ್ತಿದ್ದಾರೆ. ಟಿವಿ ಧಾರಾವಾಹಿಗಳ ಪ್ರೇಮಕತೆಗಳ ಸ್ವರೂಪವನ್ನೇ ಬದಲಾಯಿಸಲು ಸಜ್ಜಾಗಿರುವ “ನೂರು ಜನ್ಮಕೂ’ ದ ಮೊದಲ ಸಂಚಿಕೆಯನ್ನು ತಪ್ಪಿಸಿಕೊಳ್ಳಬೇಡಿ.