ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಉಪಮುಖ್ಯಮಂತ್ರಿ ಸೇರಿದಂತೆ ಏಳು ಸಚಿವರು ಸೇರಿ 140 ಶಾಸಕರು ಇನ್ನೂ ತಮ್ಮ ಆಸ್ತಿವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟದ ಉಪಮುಖ್ಯಮಂತ್ರಿ ಸೇರಿದಂತೆ ಏಳು ಸಚಿವರು ಸೇರಿ 140 ಶಾಸಕರು ಇನ್ನೂ ತಮ್ಮ ಆಸ್ತಿವಿವರವನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಸಿಲ್ಲ.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ 88 ವಿಧಾನಸಭೆ ಸದಸ್ಯರು ಮತ್ತು 52 ವಿಧಾನಪರಿಷತ್ ಸದಸ್ಯರು ಆಸ್ತಿ ವಿವರನ್ನು ಘೋಷಣೆ ಮಾಡಿಕೊಂಡಿಲ್ಲ. ಗಡುವು ಮುಗಿದು 3 ತಿಂಗಳು ಮತ್ತು ಹೆಚ್ಚುವರಿ ಕಾಲಾವಕಾಶ ಅವಧಿ ಮುಗಿದು ತಿಂಗಳು ಕಳೆದರೂ ತಮ್ಮ ಆಸ್ತಿ ವಿವರ ನೀಡುವ ಗೋಜಿಗೆ ಶಾಸಕರು ಮುಂದಾಗದಿರುವುದು ವಿಪರ್ಯಾಸ..!
ಸಾಮಾಜಿಕ ಕಾರ್ಯಕರ್ತ ಎಚ್.ಎಂ.ವೆಂಕಟೇಶ್ ಆರ್ಟಿಐ ಮೂಲಕ ಪಡೆದಿರುವ ಮಾಹಿತಿಯಲ್ಲಿ 140 ಶಾಸಕರು ತಮ್ಮ ಆಸ್ತಿ ವಿವರ ಸಲ್ಲಿಕೆ ಮಾಡದಿರುವುದು ಗೊತ್ತಾಗಿದೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಹೀಂಖಾನ್, ಮಂಕಾಳ್ ವೈದ್ಯ, ಡಾ.ಎಂ.ಸಿ.ಸುಧಾಕರ್, ಜಮೀರ್ ಅಹ್ಮದ್ ಖಾನ್, ರಾಮಲಿಂಗಾರೆಡ್ಡಿ, ಕೆ.ಎಚ್.ಮುನಿಯಪ್ಪ ಆಸ್ತಿ ವಿವರ ಸಲ್ಲಿಕೆ ಮಾಡದ ಸಚಿವರಾಗಿದ್ದಾರೆ. ಇನ್ನುಳಿದಂತೆ ಲಕ್ಷ್ಮಣ್ ಸವದಿ, ಸಿದ್ದು ಸವದಿ, ಅಶೋಕ್ ಪಟ್ಟಣ್, ಲತಾ ಮಲ್ಲಿಕಾರ್ಜುನ್, ಡಾ.ಎಚ್.ಡಿ. ರಂಗನಾಥ್, ರೂಪಕಲಾ, ಗೋಪಾಲಯ್ಯ, ಎನ್.ಎ.ಹ್ಯಾರಿಸ್, ಸತೀಶ್ ರೆಡ್ಡಿ, ಸಿ.ಕೆ.ರಾಮಮೂರ್ತಿ, ಎ.ಎಸ್.ಪೊನ್ನಣ್ಣ ಪ್ರಮುಖರಾಗಿದ್ದಾರೆ.
ಇನ್ನು, ವಿಧಾನಪರಿಷತ್ ಸದಸ್ಯರಾದ ಎಂ.ಕೆ.ಪ್ರಾಣೇಶ್, ಎಸ್.ಎಲ್.ಭೋಜೇಗೌಡ, ಡಾ.ವೈ.ಎ.ನಾರಾಯಣಸ್ವಾಮಿ, ಪ್ರದೀಪ್ ಶೆಟ್ಟರ್, ದಿನೇಶ್ ಗೂಳಿಗೌಡ, ಶಶಿಲ್ ನಮೋಶಿ, ಎಸ್.ವಿ.ಸಂಕನೂರು, ಟಿ.ಎ.ಶರವಣ, ಕೆ.ಎ.ತಿಪ್ಪೇಸ್ವಾಮಿ, ಸಿ.ಪಿ.ಯೋಗೇಶ್ವರ್ ಸೇರಿ 52 ಶಾಸಕರು ಆಸ್ತಿವಿವರ ಸಲ್ಲಿಕೆ ಮಾಡಿಲ್ಲ.
ಲೋಕಾಯುಕ್ತ ಸಂಸ್ಥೆಗೆ ಆಸ್ತಿ ವಿವರ ಸಲ್ಲಿಕೆ ಮಾಡದ 140 ಶಾಸಕರ ಹೆಸರು ಪಟ್ಟಿಯನ್ನು ಲೋಕಾಯುಕ್ತರು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ. ಲೋಕಾಯುಕ್ತರು ರವಾನಿಸಿರುವ ಶಾಸಕರ ಪಟ್ಟಿಯ ಕಡತಕ್ಕೆ ರಾಜ್ಯಪಾಲರು ಸಹಿ ಹಾಕಿದ ಬಳಿಕ ಅದನ್ನು ಪತ್ರಿಕೆಗಳಲ್ಲಿ ಬಹಿರಂಗಗೊಳಿಸಲಾಗುತ್ತದೆ. ಲೋಕಾಯುಕ್ತ ಕಾಯ್ದೆಯಲ್ಲಿ ಇಷ್ಟಕ್ಕೆ ಮಾತ್ರ ಅವಕಾಶ ಇರುವ ಕಾರಣ ಪತ್ರಿಕೆಗಳ ಮೂಲಕ ಸಾರ್ವಜನಿಕರ ಮುಂದೆ ಶಾಸಕರ ಹೆಸರನ್ನು ಬಹಿರಂಗಪಡಿಸಲಾಗುತ್ತದೆ. ರಾಜ್ಯದಲ್ಲಿ ಲೋಕಾಯುಕ್ತ ಕಾಯ್ದೆಯನ್ನು ಜಾರಿಗೆ ತಂದ ಜನಪ್ರತಿನಿಧಿಗಳೇ ಲೋಕಾಯುಕ್ತ ಕಾಯ್ದೆಯನ್ನು ಉಲ್ಲಂಘಿಸುತ್ತಿದ್ದು, ರಾಜ್ಯದ ನಾಗರಿಕರಿಗೆ ವಿಧಾನಸೌಧದಿಂದ ಆಡಳಿತ ನಡೆಸುವ ಜನಪ್ರತಿನಿಧಿಗಳು ಕಾನೂನುಗಳನ್ನು ಪಾಲಿಸುವಂತೆ ನಾಗರಿಕರಿಗೆ ಹೇಳುವ ನೈತಿಕತೆಯನ್ನು ಕಳೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ.
ಶಾಸಕರು ಪ್ರತಿವರ್ಷ ಜೂ.30 ರೊಳಗೆ ತಮ್ಮ ಆಸ್ತಿ ವಿವರನ್ನು ಲೋಕಾಯುಕ್ತ ಸಂಸ್ಥೆಗೆ ಸಲ್ಲಿಕೆ ಮಾಡಬೇಕು. ಒಂದು ವೇಳೆ ನಿಗದಿತ ಅವಧಿಯಲ್ಲಿ ಸಲ್ಲಿಕೆ ಮಾಡಲು ಸಾಧ್ಯವಾಗಿದ್ದರೆ ಎರಡು ತಿಂಗಳ ಕಾಲ ಹೆಚ್ಚುವರಿ ಕಾಲಾವಕಾಶ ನೀಡಲಾಗುತ್ತದೆ. ಆಸ್ತಿ ವಿವರ ಸಲ್ಲಿಕೆಗೆ ಆ.31 ಅಂತಿಮ ಗಡುವು ನೀಡಲಾಗುತ್ತದೆ. ಈ ಅವಧಿಯಲ್ಲಿಯೂ ಆಸ್ತಿವಿವರ ಸಲ್ಲಿಕೆ ಮಾಡದಿದ್ದರೆ ಅಂತಹವರ ಹೆಸರಿನ ಪಟ್ಟಿಯನ್ನು ಲೋಕಾಯುಕ್ತಕ್ಕೆ ಕಳುಹಿಸಿಕೊಡಲಾಗುತ್ತದೆ. ಆಸ್ತಿ ವಿವರ ಸಲ್ಲಿಕೆ ಮಾಡದಿದ್ದರೂ ಯಾವುದೇ ಕ್ರಮ ಕೈಗೊಳ್ಳಲು ಲೋಕಾಯುಕ್ತ ಕಾಯ್ದೆಯಲ್ಲಿ ಅವಕಾಶ ಇಲ್ಲ. ಹೀಗಾಗಿ ಜನಪ್ರತಿನಿಧಿಗಳು ಆಸ್ತಿ ವಿವರ ಸಲ್ಲಿಕೆಗೆ ನಿರ್ಲಕ್ಷ್ಯತನ ತೋರುತ್ತಿದ್ದಾರೆ ಎಂಬುದು ಸಾರ್ವಜನಿಕರ ಆಪಾದನೆಯಾಗಿದೆ.
ಆಸ್ತಿ ವಿವರ ಸಲ್ಲಿಕೆ ಮಾಡದ ಜನಪ್ರತಿನಿಧಿಗಳ ಹೆಸರಿನ ಪಟ್ಟಿಯನ್ನು ರಾಜ್ಯಪಾಲರಿಗೆ ಕಳುಹಿಸಿಕೊಡಲಾಗಿದೆ. ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು.
- ನ್ಯಾ.ಬಿ.ಎಸ್.ಪಾಟೀಲ್, ಲೋಕಾಯುಕ್ತ
ಲೋಕಾಯುಕ್ತ ಕಾಯ್ದೆಗೆ ತಿದ್ದುಪಡಿ ತರಬೇಕಾದ ಅಗತ್ಯ ಇದೆ. ಪ್ರಸ್ತುತ ಕಾಯ್ದೆಯನ್ವಯ ಆಸ್ತಿ ವಿವರ ಸಲ್ಲಿಕೆ ಮಾಡದ ಜನಪ್ರತಿನಿಧಿಗಳ ವಿರುದ್ಧ ಕ್ರಮ ಕೈಗೊಳ್ಳಲು ಅವಕಾಶ ಇಲ್ಲ. ಪ್ರತಿವರ್ಷ ಕೇವಲ ನಾಟಕೀಯ ಕಾರ್ಯವಾಗುತ್ತಿದೆ. ಆಸ್ತಿ ವಿವರ ಸಲ್ಲಿಕೆ ಮೂಲಕ ಜನಪ್ರತಿನಿಧಿಗಳು ತಮ್ಮ ನೈತಿಕತೆ ತೋರಬೇಕು.
- ಎಚ್.ಎಂ.ವೆಂಕಟೇಶ್, ಸಾಮಾಜಿಕ ಕಾರ್ಯಕರ್ತ