ಉತ್ತರಾಖಂಡ ರಾಜ್ಯ ಪರವಾನಗಿ ಪ್ರಾಧಿಕಾರ SLA ಉತ್ಪಾದನಾ ಪರವಾನಗಿಯನ್ನು ಅಮಾನತುಗೊಳಿಸಿದ ನಂತರ 14 ಉತ್ಪನ್ನಗಳ ಮಾರಾಟವನ್ನು ನಿಲ್ಲಿಸಿರುವುದಾಗಿ ಬಾಬಾ ರಾಮ್ದೇವ್ ನೇತೃತ್ವದ ಪತಂಜಲಿ ಆಯುರ್ವೇದ ಲಿಮಿಟೆಡ್ ಸುಪ್ರೀಂ ಕೋರ್ಟ್ಗೆ ತಿಳಿಸಿದೆ. ಈ ಉತ್ಪನ್ನಗಳನ್ನು ಹಿಂತೆಗೆದುಕೊಳ್ಳುವಂತೆ 5,606 ಫ್ರಾಂಚೈಸ್ ಸ್ಟೋರ್ಗಳಿಗೆ ಸೂಚನೆ ನೀಡಲಾಗಿದೆ. ಅಲ್ಲದೆ, ಎಲ್ಲಾ ಸ್ವರೂಪಗಳಲ್ಲಿ ಈ 14 ಉತ್ಪನ್ನಗಳ ಜಾಹೀರಾತುಗಳನ್ನು ತೆಗೆದು ಹಾಕಲು ಮಾಧ್ಯಮ ವೇದಿಕೆಗಳಿಗೆ ನಿರ್ದೇಶನ ನೀಡಲಾಗಿದೆ . ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠವು ಮುಂದಿನ ವಿಚಾರಣೆಯನ್ನು ಜುಲೈ 30ಕ್ಕೆ ನಿಗದಿ ಮಾಡಿದೆ.
1954 ರ ಡ್ರಗ್ಸ್ ಮತ್ತು ಮ್ಯಾಜಿಕ್ ರೆಮಿಡೀಸ್ ಕಾಯ್ದೆಯ “ಪುನರಾವರ್ತಿತ ಉಲ್ಲಂಘನೆ”ಯ ಕಾರಣಕ್ಕೆ ಪತಂಜಲಿಯ 14 ಉತ್ಪನ್ನಗಳ ಉತ್ಪಾದನಾ ಪರವಾನಗಿ ರದ್ದುಗೊಳಿಸಿ ಆದೇಶ ನೀಡಲಾಗಿದೆ ಎಂದು ಉತ್ತರಾಖಂಡದ ರಾಜ್ಯ ಪರವಾನಗಿ ಪ್ರಾಧಿಕಾರ ತನ್ನ ಅಫಿಡವಿಟ್ನಲ್ಲಿ ತಿಳಿಸಿದೆ. ಕಳೆದ ಏಪ್ರಿಲ್ 30ರಿಂದ ಜಾರಿಗೆ ಬರುವಂತೆ ರಾಮ್ದೇವ್ ನೇತೃತ್ವದ ಪತಂಜಲಿ ಆಯುರ್ವೇದ ಲಿಮಿಟೆಡ್ ಮತ್ತು ದಿವ್ಯ ಫಾರ್ಮಸಿಯ 14 ಉತ್ಪನ್ನಗಳ ಉತ್ಪದನಾ ಪರವಾನಗಿ ರದ್ದುಗೊಳಿಸಲಾಗಿದೆ. ಕೋವಿಡ್ ಲಸಿಕೆ ಪ್ರಯತ್ನ ಮತ್ತು ಸಮಕಾಲೀನ ವೈದ್ಯಕೀಯ ಪದ್ಧತಿಗಳ ವಿರುದ್ಧ ಪತಂಜಲಿ ನಕಾರಾತ್ಮಕ ಪ್ರಚಾರವನ್ನು ನಡೆಸಿದೆ ಎಂದು ಭಾರತೀಯ ವೈದ್ಯಕೀಯ ಸಂಘ (IMA) ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ.