ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿಗಳ ಕಚೇರಿ ವತಿಯಿಂದ ಪ್ರತಿದಿನ 993 ಮೊಟ್ಟೆ ಬಳಸಿ ತಯಾರಿಸಲಾದ ಪಫ್ಸ್ಗಳನ್ನು ಖರೀದಿಸಲಾಗಿದ್ದು, 5 ವರ್ಷಗಳಲ್ಲಿ ಮೊಟ್ಟೆ ಪಫ್ಸ್ಗಳಿಗಾಗಿಯೇ ₹3.62 ಕೋಟಿ ಖರ್ಚು ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ಪತ್ರಕರ್ತೆ ನಬಿಲಾ ಜಮಾಲ್ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿದ್ದು, ‘ಆಂಧ್ರದ ಮಾಜಿ ಮುಖ್ಯಮಂತ್ರಿಗಳ ಕಚೇರಿಯು ಕಳೆದ 5 ವರ್ಷಗಳಲ್ಲಿ ಮೊಟ್ಟೆ ಪಫ್ಸ್ಗಳಿಗಾಗಿ ₹3.62 ಕೋಟಿ ಖರ್ಚು ಮಾಡಿದೆ ಎಂದು ವರದಿಯಾಗಿದೆ. ಪ್ರತಿದಿನ 993 ಮೊಟ್ಟೆ ಪಫ್ಸ್ಗಳಂತೆ 5 ವರ್ಷಗಳಲ್ಲಿ 18 ಲಕ್ಷ ಮೊಟ್ಟೆ ಪಫ್ಸ್ಗಳನ್ನು ಖರೀದಿಸಲಾಗಿದೆ. ಇವುಗಳಿಗಾಗಿ ಪ್ರತಿವರ್ಷ ₹72 ಲಕ್ಷ ವೆಚ್ಚ ಮಾಡಲಾಗಿದೆ. ಈ ಕುತೂಹಲಕಾರಿ ಪ್ರಕರಣದಿಂದ ಸರ್ಕಾರದ ಹಣವನ್ನು ದುಂದುವೆಚ್ಚ ಮಾಡಿರುವ ಬಗ್ಗೆ ಟಿಡಿಪಿ ಸರ್ಕಾರ ತನಿಖೆಗೆ ಮುಂದಾಗಿದೆ’ ಎಂದು ಹೇಳಿದ್ದಾರೆ.
ಆರೋಪ ತಳ್ಳಿ ಹಾಕಿದ ವೈಎಸ್ಆರ್ಸಿಪಿ ಪತ್ರಕರ್ತೆ ನಬಿಲಾ ಜಮಾಲ್ ಆರೋಪ ಕುರಿತು ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ವೈಎಸ್ಆರ್ಸಿಪಿ, ‘ಸತ್ಯಾಸತ್ಯತೆಯನ್ನು ಪರಿಶೀಲಿಸದೆ ಅಥವಾ ನಂಬಲರ್ಹ ಮೂಲಗಳನ್ನು ಉಲ್ಲೇಖಿಸದೆ ಪತ್ರಕರ್ತರು ಇಂತಹ ಆಧಾರ ರಹಿತ ವದಂತಿಗಳಿಗೆ ಹರಡುತ್ತಿರುವುದನ್ನು ನೋಡುವುದು ನಿಜವಾಗಿಯೂ ನಿರಾಶಾದಾಯಕವಾಗಿದೆ. ಯಾವುದೇ ದೃಢೀಕರಣ ಅಥವಾ ಪುರಾವೆಗಳಿಲ್ಲದೆ ಇಂತಹ ಅಬ್ಬರದ ತಪ್ಪು ಮಾಹಿತಿಯನ್ನು ಟ್ವೀಟ್ ಮಾಡುವುದು ಹೇಗೆ? ಸಾಮಾಜಿಕ ಮಾಧ್ಯಮಗಳಿಂದ ಯಾದೃಚ್ಛಿಕ ಮಾಹಿತಿಯನ್ನು ಪಡೆದು ಅವುಗಳನ್ನು ಸುದ್ದಿಗಳಾಗಿ ಪರಿವರ್ತಿಸುವುದು ಪತ್ರಿಕೋದ್ಯಮಕ್ಕೆ ಮಾಡುವ ಅಪಚಾರವಾಗಿದೆ. ಸತ್ಯಕ್ಕಿಂತ ವದಂತಿಗಳಿಗೆ ಆದ್ಯತೆ ನೀಡುತ್ತಿರುವುದು ವಿಷಾದದ ಸಂಗತಿ’ ಎಂದು ತಿರುಗೇಟು ನೀಡಿದೆ.