ರಾಜ್ಯದ ಭೋವಿ ಅಭಿವೃದ್ಧಿ ನಿಗಮದಲ್ಲಿ 120 ಫಲಾನುಭವಿಗಳ ಹೆಸರಿನಲ್ಲಿ ಸಾಲ ಮಂಜೂರಾತಿ ಮಾಡಿ 60 ಕೋಟಿ ರು. ಅವ್ಯವಹಾರ ನಡೆಸಿದ್ದು, ಈ ಹಣವನ್ನು 100ಕ್ಕೂ ಹೆಚ್ಚಿನ ಖಾತೆಗಳಿಗೆ ವರ್ಗಾಯಿಸಿ ನಿಗಮದ ಪ್ರಧಾನ ವ್ಯವಸ್ಥಾಪಕ ಸೇರಿದಂತೆ 27 ಮಂದಿ ಜೇಬಿಗಿಳಿಸಿಕೊಂಡಿರುವ ಮಹತ್ವದ ಸಂಗತಿ ರಾಜ್ಯ ಅಪರಾಧ ತನಿಖಾ ದಳದ ತನಿಖೆಯಲ್ಲಿ ಬಯಲಾಗಿದೆ. ಬಿಜೆಪಿ ಕಾಲದಲ್ಲಿ ನಡೆದಿದೆ ಎನ್ನಲಾದ 21 ಹಗರಣಗಳ ಬೇಟೆಯನ್ನು ಕಾಂಗ್ರೆಸ್ ಆರಂಭಿಸಿದೆ. ಆ ಸಂಬಂಧ ಭೋವಿ ಹಗರಣ ತನಿಖೆಯನ್ನು ಸಿಐಡಿ ತೀವ್ರಗೊಳಿಸಿದೆ. ಹಗರಣ ಸಂಬಂಧ ಭೋವಿ ಅಭಿವೃದ್ಧಿ ನಿಗಮದಲ್ಲಿ ಸಂಗ್ರಹಿಸಿದ ದಾಖಲೆಗಳು ಹಾಗೂ ಬಂಧಿತ ಆರೋಪಿಯಾಗಿರುವ ನಿಗಮದ ಕಚೇರಿಯ ಅಧೀಕ್ಷಕ ಸುಬ್ಬಪ್ಪ ವಿಚಾರಣೆ ವೇಳೆ ಹೇಳಿದ ಮಾಹಿತಿ ಆಧರಿಸಿ ಅಕ್ರಮವು 60 ಕೋಟಿ ರುಪಾಯಿ ಎನ್ನುವುದು ಖಚಿತವಾಗಿದೆ.
ವಾಲ್ಮೀಕಿ ನಿಗಮದಂತೆ ಅಕಮ ಹಣ ವರ್ಗಾವಣೆ ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾದರಿಯಲ್ಲೇ ಭೋವಿ ಅಭಿವೃದ್ಧಿ ನಿಗಮದಲ್ಲೂ ಹಣ ಅಕ್ರಮ ವರ್ಗಾವಣೆಯಾಗಿದೆ. ಆದರೆ ವಾಲ್ಮೀಕಿ ನಿಗಮದ ಹಣವು ನೇರವಾಗಿ ಆರೋಪಿಗಳಿಗೆ ಸಂದಾಯವಾಗಿದ್ದರೆ, ಭೋವಿ ನಿಗಮದ ಹಣವು ಫಲಾನುಭವಿಗಳ ಖಾತೆ ಮೂಲಕ ಆರೋಪಿಗಳ ಕಿಸೆ ಸೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.