ಭಾರತದ ಹೆದ್ದಾರಿ ಜಾಲವನ್ನು ಉತ್ತಮಗೊಳಿಸುವ ಸಲುವಾಗಿ ದೇಶಾದ್ಯಂತ 74 ಹೊಸ ಸುರಂಗ ಮಾರ್ಗಗಳನ್ನು ನಿರ್ಮಿಸಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾಹಿತಿ ನೀಡಿದ್ದಾರೆ. ಇದು ಅಂದಾಜು 1 ಲಕ್ಷ ಕೋಟಿ ಮೊತ್ತದ ಬೃಹತ್ ಯೋಜನೆ ಆಗಿದ್ದು, ಒಟ್ಟು 273 ಕಿ.ಮೀ. ಉದ್ದದ ಈ ಸುರಂಗ ಮುಂದಿನ ಕೆಲವು ವರ್ಷಗಳಲ್ಲಿ ನಿರ್ಮಾಣ ವಾಗಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಫೆಡರೇಷನ್ ಇಂಡಿಯನ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ ಮಂಗಳವಾರ ಆಯೋಜಿಸಿದ್ದ ʻಟನೆಲಿಂಗ್ ಇಂಡಿಯಾ ಕಾನ್ದ್ರರೆನ್ಸ್’ನ ಎರಡನೇ ಆವೃತ್ತಿಯನ್ನು ಉದ್ದೇಶಿಸಿ ಅವರು ಈ ವಿಷಯ ಹಂಚಿಕೊಂಡರು. ಜತೆಗೆ ದೇಶದಲ್ಲಿ ಚಾಲ್ತಿಯಲ್ಲಿರುವ ಸುರಂಗ ಕಾಮಗಾರಿ ಕುರಿತು ಪ್ರಸ್ತಾಪಿಸಿರುವ ಅವರು, ಸರ್ಕಾರ ಈಗಾಗಲೇ 15 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ 49 ಕಿ.ಮೀ. ಉದ್ದದ 35 ಸುರಂಗ ನಿರ್ಮಾಣವನ್ನು ಪೂರ್ಣಗೊಳಿಸಿದೆ. ಹೆಚ್ಚುವರಿಯಾಗಿ ಒಟ್ಟು 134 ಕಿ.ಮೀ. ಉದ್ದದ ಇನ್ನೂ 69 ಸುರಂಗಗಳ ನಿರ್ಮಾಣ ಪ್ರಗತಿಯಲ್ಲಿದ್ದು, ಸುಮಾರು 40 ಸಾವಿರ ಕೋಟಿ ರುಪಾಯಿ ವೆಚ್ಚದಲ್ಲಿ ಅವುಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗಡ್ಕರಿ ತಿಳಿಸಿದ್ದಾರೆ.