ಸೋಮವಾರದಿಂದ ಮುಂಗಾರು ಅಧಿವೇಶನ ಆರಂಭಗೊಳ್ಳಲಿದ್ದು, ವಿತ್ತ ಸಚಿವೆಯಾಗಿ ನಿರ್ಮಲಾ ಸೀತರಾಮನ್ ಸತತ 7ನೇ ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸುವ ಮೂಲಕ ದಾಖಲೆ ಬರೆಯಲಿದ್ದಾರೆ.
ಸ್ವಾತಂತ್ರ್ಯ ನಂತರ ಸತತ 6 ಬಾರಿ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ಗೌರವಕ್ಕೆ ಮೊರಾರ್ಜಿ ದೇಸಾಯಿ ಪಾತ್ರರಾಗಿದ್ದರು.
ಹಣಕಾಸು ಸಚಿವರಾಗಿ 1959ರಿಂದ 1964ರ ಅವಧಿಯಲ್ಲಿ 6 ಬಾರಿ ಪೂರ್ಣ ಪ್ರಮಾಣ ಹಾಗೂ ಒಂದು ಬಾರಿ ಮಧ್ಯಂತರ ಬಜೆಟ್ ಮಂಡಿಸಿದ್ದರು. ಇದೀಗ ನಿರ್ಮಲಾ ಸೀತರಾಮನ್ 7 ಬಾರಿ ಪೂರ್ಣ ಪ್ರಮಾಣದ ಹಾಗೂ ಒಂದು ಬಾರಿ ಮಧ್ಯಂತರ ಬಜೆಟ್ ಮಂಡಿಸಿದಂತೆ ಆಗಲಿದೆ.
ಮೂರನೇ ಬಾರಿಗೆ ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ನಿರ್ಮಲಾ ಸೀತರಾಮನ್, ಕಾರ್ಮಿಕ ಸಂಘಟನೆಗಳು, ಶಿಕ್ಷಣ ತಜ್ಞರು ಸೇರಿದಂತೆ ವಿವಿಧ ವಲಯಗಳ ಸಂಘಟನೆಗಳ ಮುಖಂಡರ ಜೊತೆ ಸತತವಾಗಿ ಮಾತುಕತೆ ನಡೆಸಿದ್ದು, ಈ ಬಾರಿ ಎಂಎಸ್ ಎಂಇ ಸೇರಿದಂತೆ ಸಣ್ಣ ಉದ್ದಿಮೆಗಳಿಗೆ ಹೆಚ್ಚು ನೆರವು ನೀಡಲು ಉದ್ದೇಶಿಸಿದ್ದಾರೆ ಎನ್ನಲಾಗಿದೆ.
ಬಿಜೆಪಿ ಸರ್ಕಾರದ ಮೇಲೆ ಅತೀ ದೊಡ್ಡ ಆರೋಪ ಇರುವುದು ನಿರುದ್ಯೋಗ ಸಮಸ್ಯೆ. ಉದ್ಯೋಗ ಸೃಷ್ಟಿಸುವಲ್ಲಿ ವಿಫಲವಾಗಿದೆ ಎಂಬ ಆರೋಪ. ನಿರುದ್ಯೋಗ ಸಮಸ್ಯೆಗೆ ಉತ್ತರ ಕಂಡುಕೊಳ್ಳುವ ಜೊತೆಗೆ ತೆರಿಗೆ ಪಾವತಿದಾರರ ಹಿತ ಕಾಯುವತ್ತ ಗಮನ ಹರಿಸಲಿದ್ದಾರೆ ಎಂದು ಹೇಳಲಾಗಿದೆ.