ರಾಜ್ಯದ ಹೆಮ್ಮೆಯ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಸಕ್ಕರೆನಾಡು ಮಂಡ್ಯದಲ್ಲಿ ಅದ್ಧೂರಿಯಾಗಿ ನಡೆಯುತ್ತಿದ್ದು ಇಂದು ಕೊನೆ ದಿನವಾಗಿದೆ. ಹಾಗಾಗಿ ಇಂದು ಸಮ್ಮೇಳನಕ್ಕೆ ಸಿಕ್ಕಾಪಟ್ಟೆ ಜನ ಸೇರುವ ಸಾಧ್ಯತೆ ಇದೆ. 88ನೇ ಅಂದರೆ ಮುಂದಿನ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಗಣಿನಾಡು ಬಳ್ಳಾರಿಯಲ್ಲಿ ಜರುಗಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ತಿಳಿಸಿದ್ದಾರೆ.
ಮುಂದಿನ ಸಮ್ಮೇಳನದ ಕುರಿತು ಮಾತನಾಡಿದ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹೇಶ್ ಜೋಶಿ ಅವರು, ಮುಂದಿನ ವರ್ಷ ನುಡಿಜಾತ್ರೆ ಬಳ್ಳಾರಿಯಲ್ಲಿ ನಡೆಯಲಿದೆ. ಇಲ್ಲಿಯವರೆಗೆ ಬಳ್ಳಾರಿಯಲ್ಲಿ 4 ಸಮ್ಮೇಳನಗಳು ಜರುಗಿದ್ದು 67 ವರ್ಷಗಳ ಬಳಿಕ 5ನೇ ಸಮ್ಮೇಳನ ನಡೆಯಲಿದೆ. ನಿನ್ನೆ ಸಭೆಯಲ್ಲಿ ಈ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಳ್ಳಾರಿಯಲ್ಲಿ ಸಮ್ಮೇಳನ ಮಾಡಲು ಕಾರ್ಯಕಾರಿ ಸಮಿತಿ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ ಎಂದು ಮಹೇಶ್ ಜೋಶಿ ತಿಳಿಸಿದ್ದಾರೆ.
ಮಂಡ್ಯದ ಜನರು 87ನೇ ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಗೊಳಿಸಿದ್ದಾರೆ. ಸಮಾರಂಭದಲ್ಲಿ ಸಾಕಷ್ಟು ವಿಶೇಷ ಗೋಷ್ಠಿಗಳನ್ನು ಏರ್ಪಡಿಸಿದ್ದೆವು. ಎಲ್ಲಾ ಗೋಷ್ಠಿಗಳು ಜನರ ಗಮನ ಸೆಳೆದಿವೆ. ಇದೇ ಮೊದಲ ಬಾರಿಗೆ ಆಯೋಜಿಸಿದ್ದ ವಿಶೇಷ ಚೇತನರ ಗೋಷ್ಠಿ ಸಿಕ್ಕಾಪಟ್ಟೆ ಯಶಸ್ವಿ ಆಗಿದೆ. ದಾಖಲೆ ಮಟ್ಟದಲ್ಲಿ ರಾಜ್ಯಾದ್ಯಾಂತ ಜನ ಕನ್ನಡ ಹಬ್ಬಕ್ಕೆ ಬಂದು ಯಶಸ್ವಿಗೊಳಿಸಿದ್ದಾರೆ. ಸಾಹಿತ್ಯದಲ್ಲಿ ರಾಜಕೀಯ, ರಾಜಕೀಯದಲ್ಲಿ ಸಾಹಿತ್ಯ ಎಂಬ ಹೊಸ ಚಿಂತನೆಗೆ ಎಲ್ಲರೂ ಪ್ರಶಂಸೆ ಸೂಚಿಸಿದ್ದಾರೆ ಎಂದರು.
ಇಂದು ಸಂಜೆ 4.30ಕ್ಕೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಸಾನಿಧ್ಯದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಈ ಸಮಾರಂಭದ ಕೊನೆಯಲ್ಲಿ ಸಮ್ಮೇಳನದ ನಿರ್ಣಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ಸೇರಿದಂತೆ ಹಲವು ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಇವರ ಜೊತೆಗೆ ಸಮ್ಮೇಳನಾಧ್ಯಕ್ಷ ನಾಡೋಜ ಡಾ.ಗೊ.ರು ಚನ್ನಬಸಪ್ಪ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಶಿ ಕಾರ್ಯಕ್ರಮದಲ್ಲಿ ಇರಲಿದ್ದಾರೆ.