ಕೃಷ್ಣಲೀಲಾ ಖ್ಯಾತಿಯ ನಟಿ ಮಯೂರಿ ದಾಂಪತ್ಯ ಬದುಕಲ್ಲಿ ಎಲ್ಲವೂ ಸರಿಯಿಲ್ಲ ಅಂತ ಕಾಣುತ್ತೆ ಹೀಗಾಗಿನೇ ನಟಿ ಮಯೂರಿ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಪತಿ ಜೊತೆಗಿನ ಫೋಟೋಗಳನ್ನ ಡಿಲೀಟ್ ಮಾಡಿದ್ದಾರೆನ್ನುವ ಸುದ್ದಿ ಕೇಳಿಬಂದಿತ್ತು. ಮಯೂರಿ ನಡೆ ನೋಡ್ತಿದ್ದರೆ ಡಿವೋರ್ಸ್ ಪಡೆಯೋದು ಗ್ಯಾರಂಟಿ ಎನ್ನುವ ಮಾತುಗಳು ಗಾಸಿಪ್ ಲೋಕದಲ್ಲಿ ಜೋರಾಗಿ ಕೇಳಿಬಂದಿತ್ತು. ಈ ಎಲ್ಲಾ ಗಾಳಿಸುದ್ದಿಗೆ ನಟಿ ಮಯೂರಿ ಗ್ಯಾರಂಟಿ ನ್ಯೂಸ್ ಚಾನಲ್ ಮೂಲಕ ಬ್ರೇಕ್ ಹಾಕುವ ಕೆಲಸ ಮಾಡಿದ್ದಾರೆ.
ಐ ಆಮ್ ಹ್ಯಾಪಿ, ವಿ ಆರ್ ಆಲ್ ಹ್ಯಾಪಿ, ಎವರಿಥಿಂಗ್ ಈಸ್ ಫೈನ್ ಅಷ್ಟಕ್ಕೂ ನನ್ನ ದಾಂಪತ್ಯ ಜೀವನದಲ್ಲಿ ಏರುಪೇರಾಗಿದೆ, ಸರಿಹೋಗ್ತಿಲ್ಲ ಅಂತ ನಾನೆಲ್ಲೂ ಹೇಳಿಕೊಂಡಿಲ್ಲ. ಅಷ್ಟಕ್ಕೂ, ಜನ ಒಂದು ಹೆಜ್ಜೆ ಮುಂದೆಯಿಟ್ಟರೂ ಮಾತನಾಡ್ತಾರೆ, ಒಂದು ಹೆಜ್ಜೆ ಹಿಂದೆ ಇಟ್ಟರೂ ಮಾತನಾಡ್ತಾರೆ. ಸೋ ಅಂತವರಿಗೆಲ್ಲ ಏನು ಹೇಳೋಕೆ ಆಗಲ್ಲ ಎಂದರು. ಇದೇ ವೇಳೆ ಮಾತು ಮುಂದುವರೆಸಿದ ಮಯೂರಿ, ನಾನು ತುಂಬಾ ಪಾಸಿಟೀವ್ ಪರ್ಸನ್. ಪಬ್ಲಿಕ್ ಫಿಗರ್ ಆದ್ಮೇಲೆ ಜನಕ್ಕೆ ನಮ್ಮ ಜೀವನದ ಬಗ್ಗೆ ಕುತೂಹಲ ಇದ್ದೇ ಇರುತ್ತೆ ಹೀಗಾಗಿ ಏನಾಗ್ತಿದೆ ಅಂತ ತಿಳಿದುಕೊಳ್ಳೋಕೆ ಎದುರುನೋಡ್ತಾರೆ ಅದು ಅವರ ತಪ್ಪಲ್ಲ. ಆದರೆ, ನಾನು ಯಾರ ವೈಯಕ್ತಿಕ ವಿಷ್ಯಕ್ಕೂ ತಲೆಹಾಕಲ್ಲ. ನಾನು ಆ ತರಹದ ಹೆಣ್ಣುಮಗಳಲ್ಲ. ಬೇರೆಯವರ ಸಂಸಾರದಲ್ಲಿ ಏನಾಗ್ತಿದೆ ಅಂತ ತಿಳಿದುಕೊಳ್ಳುವಂತಹ ಕುತೂಹಲ ನನ್ನಲಿಲ್ಲ. ರಸ್ತೆ ಮಧ್ಯೆ ಹೋಗುತ್ತಿರುವಾಗ ಎಷ್ಟೇ ಆಕ್ಸಿಡೆಂಟ್ ನೋಡ್ತೇವೆ, ಸ್ಥಳದಲ್ಲೇ ಎಷ್ಟೋ ಮಂದಿ ಸಾವನ್ನಪ್ಪುತ್ತಾರೆ. ಮುಂದಿನ ಕ್ಷಣ ಏನಾಗುತ್ತೆ ಅಂತ ಗೊತ್ತಿಲ್ಲ. ಹೀಗಾಗಿ, ಎಲ್ಲರೂ ಬೇರೆಯವರ ಜೀವನದ ಬಗ್ಗೆ ತಲೆಕೆಡಿಸಿಕೊಳ್ಳುವ ಬದಲು ಅವರವರ ಜೀವನದ ಬಗ್ಗೆ ಗಮನ ಕೊಟ್ಟರೆ ಬದುಕು ಚೆನ್ನಾಗಿರುತ್ತೆ. ನನ್ನ ಬದುಕು ಚೆನ್ನಾಗಿದೆ, ಬೆಳವಣಿಗೆ ಕೂಡ ಇದೆ. ನಾನಂತೂ ಖುಷಿಯಾಗಿದ್ದೇನೆ. ಮೆದುಳು, ಮನಸ್ಸು, ದೇಹ ಎಲ್ಲವೂ ಚೆನ್ನಾಗಿದೆ ಅಂತೇಳುವ ಮೂಲಕ ಡಿವೋರ್ಸ್ ಸುದ್ದಿಗೆ ಬ್ರೇಕ್ ಹಾಕುವ ಕೆಲಸ ಮಾಡಿದ್ರು.
ಅಂದ್ಹಾಗೇ, ಮಯೂರಿ ಪ್ರೀತಿಸಿ ಮದುವೆಯಾದವರು. ಹತ್ತು ವರ್ಷಗಳ ಕಾಲ ಅರುಣ್ ಎಂಬುವರ ಜೊತೆ ಪ್ರೀತಿಯಲ್ಲಿದ್ದರು. ಕಳೆದ 4 ವರ್ಷದ ಹಿಂದೆ ಕುಟುಂಬಸ್ಥರ ಸಮ್ಮುಖದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರ ದಾಂಪತ್ಯಕ್ಕೆ ಸಾಕ್ಷಿಯಾಗಿ ಓರ್ವ ಪುತ್ರನೂ ಇದ್ದಾನೆ. ಸದ್ಯ ಮಯೂರಿ ಕಿರುತೆರೆಗೆ ಕಂಬ್ಯಾಕ್ ಮಾಡಿದ್ದಾರೆ. ಮದುವೆ-ಮಗು ಅಂತ ಎರಡು ವರ್ಷದಿಂದ ಚಿತ್ರರಂಗದಿಂದ ದೂರ ಉಳಿದಿದ್ದರು. ಇದೀಗ, ನನ್ನ ದೇವ್ರು ಸೀರಿಯಲ್ ಮೂಲಕ ಕಿರುತೆರೆ ಪಯಣ ಆರಂಭಿಸಿದ್ದಾರೆ. ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಮಯೂರಿ ಮನೆಮಾತಾಗಿದ್ದರು. ಕೃಷ್ಣಲೀಲಾ ಸಿನಿಮಾ ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ್ದ ಮಯೂರಿ, ಇಷ್ಟಕಾಮ್ಯ, ಕರಿಯಾ 2, ಪೊಗರು,ನನ್ನ ಪ್ರಕಾರ. ರುಸ್ತುಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ವೀಲ್ ಚೇರ್ ರೋಮಿಯೋ ಕೊನೆಯ ಸಿನಿಮಾ. ಈ ಚಿತ್ರದ ನಂತರ ಬ್ರೇಕ್ ಪಡೆದಿದ್ದರು. ಇದೀಗ ಸ್ಮಾಲ್ ಸ್ಕ್ರೀನ್ನಲ್ಲಿ ಹೊಸ ಜರ್ನಿ ಶುರು ಮಾಡಿದ್ದಾರೆ. ನನ್ನ ದೇವ್ರು ಶ್ರುತಿ ನಾಯ್ಡು ಪ್ರೊಡಕ್ಷನ್ ಹೌಸ್ನಲ್ಲಿ ಮೂಡಿಬರ್ತಿರೋ ಹೊಸ ಧಾರಾವಾಹಿ. ಶ್ರುತಿ ನಾಯ್ಡು ನಿರ್ಮಾಣ ಮಾಡ್ತಿರೋ ಈ ಸೀರಿಯಲ್ಗೆ ಅವರ ಪತಿ ರಮೇಶ್ ಇಂದಿರಾ ಡೈರೆಕ್ಷನ್ ಮಾಡ್ತಿದ್ದಾರೆ. ಹಾಸ್ಯ ಚಕ್ರವರ್ತಿ ನರಸಿಂಹರಾಜು ಅವ್ರ ಮೊಮ್ಮಗ ಅವಿನಾಶ್ ದಿವಾಕರ್ ಹೀರೋ ಆಗಿದ್ದು, ಮಯೂರಿ ನಾಯಕಿಯಾಗಿ ಈ ಧಾರಾವಾಹಿಯಲ್ಲಿ ಮಿಂಚಲಿದ್ದಾರೆ. ಇದೇ ಜುಲೈ 08 ರಿಂದ ನಿಮ್ಮ ಮನೆಯ ಪುಟ್ಟ ಪರದೆಯ ಮೇಲೆ ನನ್ನ ದೇವ್ರು ಮೂಡಿಬರಲಿದೆ.