ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಕಳೆದುಕೊಂಡ ತಮ್ಮ ಜಮೀನಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರು ಪರಿಹಾರ ಪಡೆದುಕೊಂಡಿದ್ದೇ ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ ಎಂದು ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಹೇಳಿದರು.
ಮುಡಾ ನಿವೇಶನ ಹಂಚಿಕೆಯಲ್ಲಿ ಮುಖ್ಯಮಂತ್ರಿಯ ಪತ್ನಿಯ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಗುರುವಾರ ದಾಖಲೆಗಳ ಸಹಿತ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಿಕರಣ ನೀಡಿದ ಪೊನ್ನಣ್ಣ, ‘ಪಾರ್ವತಿ ಅವರಿಗೆ ಜಮೀನಿನ ಮೌಲ್ಯದ ಪ್ರಕಾರ 57 ಕೋಟಿಯ ಪರಿಹಾರ ನೀಡಬೇಕಾಗಿತ್ತು. ಆದರೆ, ಕೇವಲ ₹16 ಕೋಟಿ ಮೌಲ್ಯದ ಜಮೀನು ನೀಡಲಾಗಿದೆ. ಆದರೆ, ಈ ಪರಿಹಾರ ಪಡೆದುಕೊಂಡಿರುವುದೇ ತಪ್ಪು ಎಂಬಂತೆ ಬಿಂಬಿಸಲಾಗುತ್ತಿದೆ’ ಎಂದು ವಾಗ್ದಾಳಿ ನಡೆಸಿದರು.
ನಾಗರಿಕರು ಅಸ್ತಿ ಕಳೆದುಕೊಂಡಾಗ ಅದಕ್ಕೆ ಪರಿಹಾರ ಪಡೆಯುವುದು ಮೂಲಭೂತ ಹಕ್ಕು. ಅದು ಮುಖ್ಯಮಂತ್ರಿಯ ಪತ್ನಿಯೇ ಆಗಲಿ, ಯಾರೇ ಆಗಲಿ ಎಂದ ಅವರು, ಮುಡಾದಲ್ಲಿ ಮುಖ್ಯಮಂತ್ರಿಯ ಪತ್ನಿಗೆ ಕೊಟ್ಟ ನಿವೇಶನ ಹಂಚಿಕೆಯಲ್ಲಿ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ದುರುದ್ದೇಶದ ರಾಜಕಾರಣ ಮಾಡುತ್ತಿದೆ ಎಂದರು.
1998ರಲ್ಲಿ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡಲಾಗಿತ್ತು. ನಿಂಗಣ್ಣ ಎನ್ನುವವರಿಗೆ ಆ ಜಮೀನು ಸೇರಿತ್ತು. ಮುಖ್ಯಮಂತ್ರಿಯ ಪತ್ನಿಯ ಸಹೋದರ ಮಲ್ಲಿಕಾರ್ಜುನ ಸ್ವಾಮಿ ಆ ಜಮೀನನ್ನು 2004ರಲ್ಲಿ ಕ್ರಯಕ್ಕೆ ಪಡೆದುಕೊಂಡಿದ್ದರು. 2005ರಲ್ಲಿ ಅವರು ಅದನ್ನು ವ್ಯವಸಾಯೇತರ ಜಮೀನಾಗಿ ಪರಿವರ್ತಿಸಿದ್ದರು. 2010ರಲ್ಲಿ ದಾನ ಪತ್ರದ ಮೂಲಕ ಪಾರ್ವತಿಯವರಿಗೆ ಜಮೀನು ವರ್ಗಾವಣೆಯಾಗಿತ್ತು. ಈ ಭೂಮಿಯನ್ನು ಮುಡಾ ಉಪಯೋಗ ಮಾಡಿಕೊಂಡ ಕಾರಣ ಪರಿಹಾರ ನೀಡುವಂತೆ ಸಿದ್ದರಾಮಯ್ಯ ಅವರ ಪತ್ನಿ ಮನವಿ ಮಾಡಿದ್ದರು. ಇದು ಬದಲಿ ನಿವೇಶನ ಅಲ್ಲ. ಪರಿಹಾರವಾಗಿ ನೀಡಲಾಗಿದೆ’ ಎಂದು ವಿವರಿಸಿದರು.
ಪಾರ್ವತಿ ಅವರಿಗೆ ಪರಿಹಾರ ಕೊಡುವ ಸಂದರ್ಭದಲ್ಲಿ ಬಿಜೆಪಿ ಆಡಳಿತ ಇತ್ತು. ಪಾರ್ವತಿ ಅವರು 1,48,104 ಚದರ ಅಡಿ ಜಮೀನು ಕಳೆದುಕೊಂಡಿದಾರೆ. ಆದರೆ, 38,284 ಚದರ ಅಡಿ ಜಮೀನು ಪರಿಹಾರವಾಗಿ ನೀಡಲಾಗಿದೆ ಎಂದರು.