ಸಾಮಾನ್ಯವಾಗಿ ಮನೆಯಲ್ಲಿ ಕಳ್ಳತನವಾದರೆ, ಕಳುವಾದ ವಸ್ತುಗಳು ಮರಳಿ ಸಿಗುವ ಭರವಸೆ ಇರುವುದಿಲ್ಲ. ಪೋಲೀಸರಿಗೆ ಹೇಳಿದರೂ ಕಳ್ಳನನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದೇವೆ ಎಂದು ಹೇಳುತ್ತಾರೆ. ಆದರೆ ಕಳ್ಳನಿಗೂ ಮಾನವೀಯತೆ, ಒಳ್ಳೆಯ ಮನಸ್ಸು ಇರುತ್ತದೆ ಎಂಬುದನ್ನು ಇಲ್ಲೊಬ್ಬ ಕಳ್ಳ ಸಾಬೀತುಪಡಿಸಿದ್ದಾನೆ.
ತಮಿಳುನಾಡಿನಲ್ಲಿ ಖದೀಮನೊಬ್ಬ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದಲ್ಲದೆ. ಕಳ್ಳತನ ಮಾಡಿರುವ ಬಗ್ಗೆ ಪತ್ರವನ್ನು ಸಹ ಬರೆದಿದ್ದು ಕದ್ದ ಹಣವನ್ನು ಒಂದು ತಿಂಗಳೊಳಗೆ ವಾಪಸ್ ನೀಡುವುದಾಗಿ ಹೇಳಿದ್ದಾನೆ. ತಮಿಳುನಾಡಿನ ತೂತುಕುಡಿ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಕಳ್ಳ ಬರೆದಿರುವ ಪತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಪ್ರಕರಣದ ಬಗ್ಗೆ ಸ್ಥಳೀಯ ಪೊಲೀಸರು ಮಾಹಿತಿ ನೀಡಿದ್ದು, ಚಿರೆ ಸೆಲ್ವಿನ್ ಎಂಬುವರು ತೂತುಕ್ಕುಡಿ ಜಿಲ್ಲೆಯ ತಿರುಚ್ಚಂದೂರಿನ ಮೇಘನಾಪುರದ ನಿವೃತ್ತ ಶಿಕ್ಷಕ ಅವರಿಗೆ ಒಬ್ಬ ಮಗ ಮತ್ತು ಮೂವರು ಹೆಣ್ಣು ಮಕ್ಕಳಿದ್ದು ಎಲ್ಲರೂ ಮದುವೆಯಾಗಿ ವಿವಿಧ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಜೂನ್ 17 ರಂದು ಸೆಲ್ವಿನ್ ತನ್ನ ಹೆಂಡತಿಯೊಂದಿಗೆ ಚೆನ್ನೈಗೆ ಹೋಗಿದ್ದರು ಅವರ ಮನೆಯನ್ನು ನೋಡಿಕೊಳ್ಳಲು ಒಬ್ಬ ಮಹಿಳೆಯನ್ನು ನೇಮಿಸಲಾಗಿತ್ತು.
ಜುಲೈ 1 ರಂದು ಮಹಿಳೆ ಮನೆ ಸ್ವಚ್ಛಗೊಳಿಸಲು ಬಂದಾಗ ಮನೆಯನ್ನು ನೋಡಿ ಒಂದು ಕ್ಷಣ ಶಾಕ್ ಆಗಿದ್ದಾಳೆ. ಮನೆಯ ಬೀಗ ಒಡೆದು ಕಳ್ಳತನ ಮಾಡಿರುವ ಬಗ್ಗೆ ಮಹಿಳೆ ತಕ್ಷಣ ಮಾಲೀಕರಿಗೆ ಮಾಹಿತಿ ನೀಡಿದ್ದಾಳೆ. ಸೆಲ್ವಿನ್ ತಕ್ಷಣ ಮನೆಗೆ ಬಂದು ನೋಡಿದಾಗ ಬೀರುವಿನಲ್ಲಿದ್ದ 60 ಸಾವಿರ ರೂಪಾಯಿ ನಗದು ಮತ್ತು ಚಿನ್ನದ ಬಳೆಗಳು ಹಾಗೂ ಬೆಳ್ಳಿಯ ಸರಗಳು ಕಳುವಾಗಿರುವುದು ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುವಾಗ ಕಳ್ಳ ಬರೆದ ಪತ್ರ ಅವರಿಗೆ ಸಿಕ್ಕಿದೆ. ಅದರಲ್ಲಿ ನನ್ನನ್ನು ಕ್ಷಮಿಸಿ, ನಾನು ಒಂದು ತಿಂಗಳಲ್ಲಿ ಹಣವನ್ನು ಹಿಂತಿರುಗಿಸುತ್ತೇನೆ, ಮನೆಯಲ್ಲಿ ಹುಷಾರಿಲ್ಲ, ಅದಕ್ಕೆ ಕಳ್ಳತನ ಮಾಡಿದ್ದೇನೆ ಎಂದು ಬರೆದಿದ್ದಾನೆ. ಪತ್ರವನ್ನು ನೋಡಿದ ಪೊಲೀಸರು ಮತ್ತು ಮನೆಯ ಮಾಲೀಕರು ಒಂದು ಕ್ಷಣ ಅಚ್ಚರಿಗೀಡಾದರು ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಳ್ಳ ಪತ್ರದಲ್ಲಿ ಹೇಳಿರುವಂತೆ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಾನೋ ಇಲ್ಲವೋ ಎಂಬುದನ್ನು ಸ್ವಲ್ಪ ಸಮಯ ಕಾದು ನೋಡಬೇಕಿದೆ.