ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃಧ್ದಿ ನಿಗಮದಲ್ಲಿ ನಡೆದಿರುವ ಹಗರಣದ ತನಿಖೆ ನಡೆಸುತ್ತಿರುವ ಎಸ್ಐಟಿ, ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿಮಾಡಿದೆ. ಸಿಐಡಿ ಕಚೇರಿಗೆ ಜುಲೈ 9 ರಂದು ವಿಚಾರಣೆಗೆ ಹಾಜರಾಗುವಂತೆ ನೊಟೀಸ್ ಜಾರಿಮಾಡಲಾಗಿದೆ. ವಿಚಾರಣ ಪ್ರಕ್ರಿಯೆಯನ್ನು ವಿಡಿಯೋ ರೆಕಾರ್ಡ್ ಮಾಡಿಕೊಂಡು ಹೇಳಿಕೆ ದಾಖಲು ಮಾಡಿಕೊಳ್ಳುತ್ತೇವೆ ಎಂದು ಎಸ್ಐಟಿ ತಿಳಿಸಿದೆ.
ಮಾಜಿ ಸಚಿವ ನಾಗೇಂದ್ರ ರಾಜೀನಾಮೆ ನೀಡಿದ ಬಳಿಕ ಎಸ್ಐಟಿ ಅಧಿಕಾರಿಗಳಿಂದ ಯಾವುದೇ ವಿಚಾರಣೆ ಮಾಡಿರಲಿಲ್ಲ. ಇದೀಗ ಮೊದಲ ಬಾರಿಗೆ ಮಾಜಿ ಸಚಿವ ನಾಗೇಂದ್ರಗೆ ಎಸ್ಐಟಿ ನೋಟಿಸ್ ನೀಡಿದ್ದು, ತನಿಖೆಗೆ ಹಾಜರಾಗುವಂತೆ ತಿಳಿಸಿದೆ.
ಈ ಮಧ್ಯೆ ಕಾಂಗ್ರೆಸ್ ಶಾಸಕ ಹಾಗೂ ವಾಲ್ಮೀಕಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ಇತ್ತೀಚೆಗೆ ರಾಯಚೂರಿನಲ್ಲಿ ಬೆಚ್ಚಿ ಬೀಳಿಸುವ ಸಂಗತಿ ಬಾಯ್ಬಿಟ್ಟಿದ್ದರು. ಈ ಹಗರಣದಲ್ಲಿ ಅಂತರರಾಜ್ಯ ಜಾಲಗಳಿವೆ ಎಂಬ ಬಗ್ಗೆ ಮಾಹಿತಿ ನೀಡುವ ಮೂಲಕ ಪ್ರಕರಣಕ್ಕೆ ಮತ್ತೊಂದು ಆಯಾಮ ನೀಡಿದ್ದರು. ಇದೆಲ್ಲಾ ವಿಚಾರವಾಗಿ ಸದ್ಯ ಇವರಿಗೂ ವಿಶೇಷ ತನಿಖಾ ತಂಡದಿಂದ ನೋಟಿಸ್ ನೀಡಿದ್ದು ತನಿಖೆಗೆ ಹಾಜರಾಗುವಂತೆ ತಿಳಿಸಿದೆ.