ವಿಚ್ಛೇದಿತ ಮುಸ್ಲಿಂ ಮಹಿಳೆ ತನ್ನ ಪತಿಯಿಂದ ಜೀವನಾಂಶವನ್ನು ಪಡೆಯಬಹುದು ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 125 ರ ಅಡಿಯಲ್ಲಿ ವಿಚ್ಛೇದಿತ ಪತ್ನಿಗೆ ಜೀವನಾಂಶ ನೀಡುವ ನಿರ್ದೇಶನವನ್ನು ಪ್ರಶ್ನಿಸಿ ಮುಸ್ಲಿಂ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಮತ್ತು ನ್ಯಾಯಮೂರ್ತಿ ಅಗಸ್ಟಿನ್ ಜಾರ್ಜ್ ಮಾಸಿಹ್ ಅವರ ನ್ಯಾಯಪೀಠ ವಜಾಗೊಳಿಸಿದ ನಂತರ ಈ ಮಹತ್ವದ ತೀರ್ಪು ನೀಡಿದೆ. ವಿಚ್ಛೇದಿತ ಮುಸ್ಲಿಂ ಮಹಿಳೆ ಪತಿಯಿಂದ ಜೀವನಾಂಶ ಪಡೆಯಬಹುದು, ಜೀವನಾಂಶ ಕೋರುವ ಕಾನೂನು ಎಲ್ಲಾ ವಿವಾಹಿತ ಮಹಿಳೆಯರಿಗೂ ಅನ್ವಯವಾಗುತ್ತದೆ. ಜೀವನಾಂಶ ವಿಚಾರದಲ್ಲಿ ಅವರ ಧರ್ಮ ಅನ್ವಯಿಸಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ಜೀವನಾಂಶ ದಾನವಲ್ಲ, ವಿವಾಹಿತ ಮಹಿಳೆಯರ ಹಕ್ಕು. ಗೃಹಿಣಿಯಾಗಿರುವ ಹೆಂಡತಿ ಭಾವನಾತ್ಮಕವಾಗಿ ಅವಲಂಬಿತಳು ಆದರೆ ಈ ವಿಚಾರದ ಬಗ್ಗೆ ಕೆಲವು ಗಂಡಂದಿರಿಗೆ ಪ್ರಜ್ಞೆ ಇರುವುದಿಲ್ಲ. ಭಾರತೀಯ ಪುರುಷನು ಗೃಹಿಣಿಯ ಪಾತ್ರವನ್ನು ಗುರುತಿಸಬೇಕಾದ ಸಮಯ ಈಗ ಬಂದಿದೆ ಎಂದು ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅಭಿಪ್ರಾಯ ಪಟ್ಟಿದೆ.