ದೆಹಲಿ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷದ ಅತಿಶಿ ಸಿಂಗ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇಂದು ಸಂಜೆ 4:30ಕ್ಕೆ ಲೆಫ್ಟಿನೆಂಟ್ ಗವರ್ನರ್ ನಿವಾಸವಾದ ರಾಜಭವನದಲ್ಲಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅತಿಶಿಯವರೊಂದಿಗೆ ಆಮ್ ಆದ್ಮಿ ಪಕ್ಷದ ಐವರು ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಈ ಮೊದಲು ಸೆ.26-27ರ ವಿಶೇಷ ಅಧಿವೇಶನ ವೇಳೆ ಪ್ರಮಾಣ ವಚನ ಸ್ವೀಕರಿಸಲು ಚಿಂತಿಸಿತ್ತು. ಆದರೆ ಲೆಫ್ಟಿನೆಂಟ್ ಗವರ್ನರ್ ಸಲಹೆ ಮೇರೆಗೆ ಶನಿವಾರ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿಯ ಸುಷ್ಮಾ ಸ್ವರಾಜ್, ಕಾಂಗ್ರೆಸ್ನ ಶೈಲಾ ದೀಕ್ಷಿತ್ ಬಳಿಕ ಎಎಪಿಯ ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಹಾಗೂ ದೆಹಲಿಯ ಅತಿ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ
ಎಎಪಿ ಆರಂಭದಲ್ಲಿ ಅತಿಶಿ ಮಾತ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಬೇಕೆಂದು ಯೋಜಿಸಿತ್ತು. ಬಳಿಕ ಮಂತ್ರಿಮಂಡಲದೊಂದಿಗೆ ಪ್ರಮಾಣವಚನ ಸ್ವೀಕರಿಸಲು ನಿರ್ಧರಿಸಲಾಗಿದೆ. ಹಿಂದಿನ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸಚಿವರಾಗಿ ಮುಂದುವರೆಯಲಿದ್ದು, ಪಕ್ಷದ ಇಬ್ಬರು ಶಾಸಕರನ್ನು ಸಹ ಹೊಸ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲಾಗುವುದು. ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಅತಿಶಿ ಅವರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ಮಂಗಳವಾರ ಹುದ್ದೆಗೆ ರಾಜೀನಾಮೆ ನೀಡಿದ ಅರವಿಂದ್ ಕೇಜ್ರಿವಾಲ್ ಅವರಿಂದ ಅತಿಶಿ ಅಧಿಕಾರ ಸ್ವೀಕರಿಸಲಿದ್ದಾರೆ. ಅತಿಶಿ ದೆಹಲಿ ಅಸೆಂಬ್ಲಿಯಲ್ಲಿ ಕಲ್ಕಾಜಿ ಕ್ಷೇತ್ರವನ್ನು ಪ್ರತಿನಿಧಿಸುತ್ತಾರೆ ಮತ್ತು ದೆಹಲಿ ಸರ್ಕಾರದಲ್ಲಿ ಅತಿ ಹೆಚ್ಚು ಖಾತೆಗಳನ್ನು ಹೊಂದಿದ್ದಾರೆ.