ಗುಜರಾತ್ನ ಗಾಂಧಿನಗರದಲ್ಲಿ ಅಯೋಜನೆಯಾಗಿದ್ದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶದಲ್ಲಿ ಕರ್ನಾಟಕ ಸರ್ಕಾರಕ್ಕೆ ಒಟ್ಟು 4 ವಿಭಾಗಗಳಲ್ಲಿ ಪ್ರಶಸ್ತಿ ದೊರೆತಿವೆ. ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಿದ್ದ 4ನೇ ಆವೃತ್ತಿಯ ಜಾಗತಿಕ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಮಾವೇಶ ಹಾಗೂ ಎಕ್ಸ್ಪೋ (ರೀ-ಇನ್ ವೆಸ್ಟ್ 2024) ನಲ್ಲಿ ಕರ್ನಾಟಕ ಉತ್ತಮ ಸಾಧನೆ ಮಾಡಿದೆ.
ಸೌರಶಕ್ತಿ ಸ್ಥಾಪಿತ ಸಾಮರ್ಥ್ಯ ವಿಭಾಗದಲ್ಲಿ ದೇಶದಲ್ಲಿ 2ನೇ ಸ್ಥಾನ, ಪವನ ಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ 3ನೇ ಸ್ಥಾನ, ಜಲವಿದ್ಯುತ್ ಸ್ಥಾಪಿತ ಸಾಮರ್ಥ್ಯದಲ್ಲಿ 2ನೇ ಸ್ಥಾನ ಮತ್ತು ಪಾವಗಡ ಸೋಲಾರ್ ಪಾರ್ಕ್ಗೆ ದೇಶದ ಅತಿದೊಡ್ಡ ನವೀಕರಿಸಬಹುದಾದ ಇಂಧನ ಪಾರ್ಕ್ ಪ್ರಶಸ್ತಿ ದೊರೆತಿದೆ. ಈ ವೇಳೆ ಮಾತನಾಡಿದ ರಾಜ್ಯ ಇಂಧನ ಇಲಾಖೆಯ ಎಸಿಎಸ್ ಗೌರವ್ ಗುಪ್ತಾ, ʻಮುಂದಿನ ಆರೇಳು ವರ್ಷಗಳಲ್ಲಿ ಕರ್ನಾಟಕದಲ್ಲಿ 19,200 ಮೆ. ವ್ಯಾಟ್ಸ್ ಹೆಚ್ಚುವರಿಯಾಗಿ ಉತ್ಪಾದನೆಯಾಗಲಿದೆ. ರಾಜ್ಯದಲ್ಲಿ ಪವನ ಮತ್ತು ಸೌರಶಕ್ತಿ ಉತ್ಪಾದನೆಗೆ ವಿಫುಲ ಅವಕಾಶಗಳಿವೆ. ಹಲವು ಹೂಡಿಕೆದಾರರು ಕರ್ನಾಟಕಕ್ಕೆ ಬರಲು ಆಸಕ್ತಿ ತೋರುತ್ತಿದ್ದಾರೆ. ಅವರ ಜೊತೆ ಮಾತುಕತೆ ನಡೆಯುತ್ತಿದೆʼ ಎಂದರು. ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಸ್ಟಾಲ್ಗೆ ಭೇಟಿ ನೀಡಿದರು.