ನಟ ನಾಗ ಚೈತನ್ಯ ಹಾಗೂ ನಟಿ ಶೋಭಿತಾ ಧೂಳಿಪಾಲ ಡಿಸೆಂಬರ್ 5, 2024ರಂದು ಹೈದರಾಬಾದ್ನ ಅನ್ನಪೂರ್ಣ ಸ್ಟುಡಿಯೋದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಮದುವೆಯ ಕೆಲವು ಸುಂದರ ಕ್ಷಣಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿವೆ. ಮಗನ ಮದುವೆ ದಿನವೇ ಹಿರಿಯ ನಟ ನಾಗಾರ್ಜುನ್ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಈಗ ಶೋಭಿತಾ ತಮ್ಮ ಮದುವೆಯ ವಿಶೇಷ ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿದ್ದಾರೆ. ಸಮಂತಾ ಜೊತೆಗಿನ ವಿಚ್ಛೇದನದ ನಂತರ 2 ವರ್ಷಗಳ ಕಾಲ ಶೋಭಿತಾ ಜೊತೆಯಲ್ಲಿ ಡೇಟಿಂಗ್ ಮಾಡಿದ ನಾಗ ಚೈತನ್ಯ, ಇಬ್ಬರ ಕುಟುಂಬದ ಒಪ್ಪಿಗೆಯಿಂದ ಈ ವರ್ಷ ಆಗಸ್ಟ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡು ಈಗ ಹೊಸ ಜೀವನ ಆರಂಭಿಸಿದ್ದಾರೆ. ಮಗನ ಮದುವೆಯ ಕುರಿತು ನಾಗಾರ್ಜುನ್ ತಮ್ಮ ಸಂತಸವನ್ನು ಹಂಚಿಕೊಂಡು, “ನಾಗ ಚೈತನ್ಯ ಮತ್ತು ಶೋಭಿತಾ ಹೊಸ ಅಧ್ಯಾಯ ಆರಂಭಿಸುತ್ತಿರುವುದನ್ನು ನೋಡಿ ತುಂಬಾ ಖುಷಿ ಆಗುತ್ತಿದೆ.
ಇದು ನನ್ನ ಜೀವನದ ಭಾವನಾತ್ಮಕ ಕ್ಷಣ. ಶೋಭಿತಾ, ನೀನು ಈಗಾಗಲೇ ನಮ್ಮ ಜೀವನದಲ್ಲಿ ಅಪಾರ ಖುಷಿ ತಂದಿದ್ದೀಯ” ಎಂದು ಬರೆದುಕೊಂಡಿದ್ದಾರೆ. ಅಕ್ಕಿನೇನಿ ನಾಗೇಶ್ವರ ರಾವ್ ಅವರ ಮೂರ್ತಿಯ ಕೆಳಗೆ ಮದುವೆ ನೆರವೇರಿದ ಸಂಗತಿಗೂ ನಾಗಾರ್ಜುನ್ ವಿಶೇಷತೆಯನ್ನು ಉಲ್ಲೇಖಿಸಿದ್ದಾರೆ. ಮದುವೆಯ ನಂತರ, ನವ ದಂಪತಿ ಶ್ರೀಶೈಲದ ಶ್ರೀ ಭ್ರಮರಾಂಬ ಮಲ್ಲಿಕಾರ್ಜುನ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದು, ಈ ಪೂಜೆಯ ಫೋಟೋಗಳು ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ. ಹೊಸ ಜೋಡಿಗೆ ಅಭಿಮಾನಿಗಳು ಮತ್ತು ಕುಟುಂಬದವರು ಹೃತ್ಪೂರ್ವಕವಾಗಿ ಶುಭ ಕೋರಿದ್ದಾರೆ.