ಅದಾನಿ ಪವರ್ನ ಅಂಗ ಸಂಸ್ಥೆಯಾದ ಅದಾನಿ ಪವರ್ ಜಾರ್ಖಂಡ್ ಲಿಮಿಟೆಡ್ ಬಾಂಗ್ಲಾದೇಶಕ್ಕೆ ತನ್ನ ವಿದ್ಯುತ್ ಸರಬರಾಜನ್ನು ಅರ್ಧದಷ್ಟು ಕಡಿಮೆ ಮಾಡಿದೆ. 846 ದಶಲಕ್ಷ ಡಾಲರ್ ಹಣವನ್ನು ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ಅದಾನಿ ಕಂಪನಿ ಬಾಂಗ್ಲಾದೇಶಕ್ಕೆ ವಿದ್ಯುತ್ ಸರಬರಾಜನ್ನು ಕಡಿತಗೊಳಿಸಿದೆ.
ಗುರುವಾರ ರಾತ್ರಿಯಿಂದ ವಿದ್ಯುತ್ ಕಡಿತದಿಂದಾಗಿ ಬಾಂಗ್ಲಾದೇಶಲ್ಲಿ 1,600 ಮೆಗಾವ್ಯಾಟ್ಗಳನ್ನು ವಿದ್ಯುತ್ ಕೊರತೆಯಾಗಿದೆ. 1,496 MW ಅದಾನಿ ಸ್ಥಾವರವು ಈಗ ಅರ್ಧ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಕೇವಲ 700 MW ವಿದ್ಯುತ್ ಮಾತ್ರ ಉತ್ಪಾದಿಸುತ್ತದೆ. ಅದಾನಿ ಪವರ್ ತನ್ನ ಪೂರೈಕೆಯನ್ನು ಅರ್ಧದಷ್ಟು ಕಡಿಮೆಗೊಳಿಸುವುದರಿಂದ ಕೈಗಾರಿಕೆ, ವ್ಯವಹಾರಗಳು ಮತ್ತು ಗೃಹ ಬಳಕೆಯ ಮನೆಗಳಿಗೂ ಸಮಸ್ಯೆಯಾಗುತ್ತಿದೆ.
ಬಾಂಗ್ಲಾದೇಶದ ಪವರ್ ಡೆವಲಪ್ಮೆಂಟ್ ಬೋರ್ಡ್ (PDB) ತನ್ನ ಬಾಕಿಗಳನ್ನು ಪಾವತಿಸಲು ಕೆಲಸ ಮಾಡುತ್ತಿದೆ. ಬಾಂಗ್ಲಾದೇಶ ಕೃಷಿ ಬ್ಯಾಂಕ್ ಅದಾನಿ ಪವರ್ಗೆ 170.03 ಮಿಲಿಯನ್ ಡಾಲರ್ ಸಾಲದ ಪತ್ರವನ್ನು ನೀಡಲು ಒಪ್ಪಿಕೊಂಡಿದ್ದರೂ, ಸೀಮಿತ ಡಾಲರ್ ಲಭ್ಯತೆಯಿಂದಾಗಿ ಅದನ್ನು ಪಾವತಿಸಲು ಸಾಧ್ಯವಾಗಲಿಲ್ಲ.
ದಂಗೆಯ ಬಳಿಕ ಬಾಂಗ್ಲಾದಲ್ಲಿ ಆರ್ಥಿಕ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಬಾಂಗ್ಲಾದೇಶ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಪ್ರಕಾರ ಗ್ರಾಹಕ ಹಣದುಬ್ಬರ 12 ವರ್ಷಕ್ಕಿಂತ ಹೆಚ್ಚಾಗಿದ್ದು, ಶೇ. 11.6ಕ್ಕೆ ತಲುಪಿದೆ. ಅದರಲ್ಲೂ ಆಹಾರ ಹಣದುಬ್ಬರವು ಕಳೆದ 13 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 14 ಪ್ರತಿಶತವನ್ನು ಮೀರಿದೆ. ಹಣದುಬ್ಬರ ನಿಯಂತ್ರಿಸಲು ಬಾಂಗ್ಲಾ ಕೇಂದ್ರ ಬ್ಯಾಂಕ್ ರೆಪೋ ದರವನ್ನು 10% ಏರಿಕೆ ಮಾಡಿದೆ.