ಗುಜರಾತ್ನ ಅಹಮದಾಬಾದ್ನಲ್ಲಿ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದ 188 ಮಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತೀಯ ಪೌರತ್ವ ಪ್ರಮಾಣ ಪತ್ರವನ್ನು ವಿತರಿಸಿದರು. ಈ ಕಾರ್ಯಕ್ರಮವನ್ನು ನೆರೆಯ ದೇಶದ ಪ್ರಜೆಗಳಿಗೆ ಭಾರತೀಯ ಪೌರತ್ವವನ್ನು ಪ್ರದಾನ ಮಾಡುವ, ಪೌರತ್ವ ತಿದ್ದುಪಡಿ ಕಾಯ್ದೆಯ ಜಾರಿಯ ಭಾಗವಾಗಿ ಹಮ್ಮಿಕೊಳ್ಳಲಾಗಿತ್ತು.
ಪೌರತ್ವ ಪ್ರಮಾಣ ಪತ್ರವನ್ನು ವಿತರಿಸುವುದರೊಂದಿಗೆ ಗುಜರಾತ್ನಲ್ಲಿ ರೂ. 1,003 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿಗಳಿಗೆ ಅಮಿತ್ ಶಾ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಈ ಯೋಜನೆಗಳ ಪೈಕಿ ನೂತನವಾಗಿ ತೆರೆಯಲಾಗಿರುವ ಸಿಂಧು ಭವನ್ ರಸ್ತೆಯಲ್ಲಿನ ಆಕ್ಸಿಜನ್ ಪಾರ್ಕ್, ಈಜು ಕೊಳ ಹಾಗೂ ಮಕರ್ಬದಲ್ಲಿನ ಜಿಮ್ನಾಷಿಯಂ ಸೇರಿವೆ.
ಇದಾದ ನಂತರ, ವೇಜಲ್ಪುರ್ನ ಪ್ರಹ್ಲಾದ್ ನಗರ್ ರಸ್ತೆಯಲ್ಲಿರುವ ಪಂಚ ತಲವ್ ಬಳಿಯ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿರುವ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅಮಿತ್ ಶಾ ಮಾತನಾಡಲಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆಯಡಿ ಭಾರತೀಯ ಪೌರತ್ವವನ್ನು ವಿತರಿಸುವ ವಿಸ್ತೃತ ಪ್ರಯತ್ನ ಇದಾಗಿದ್ದು, ಕರ್ನಾಟಕ ಸೇರಿದಂತೆ ಹಲವಅರು ರಾಜ್ಯಗಳಲ್ಲಿ ನಡೆಯಲಿದೆ. ಇತ್ತೀಚೆಗೆ ಬಾಂಗ್ಲಾದೇಶದಿಂದ ಕರ್ನಾಟಕಕ್ಕೆ ವಲಸೆ ಬಂದಿದ್ದ ನಿರಾಶ್ರಿತರಿಗೆ ಭಾರತೀಯ ಪೌರತ್ವವನ್ನು ಪ್ರದಾನ ಮಾಡಲಾಗಿತ್ತು.