- ಸಂತ್ರಸ್ತೆಯೊಬ್ಬರ ಅಪಹರಣ ಆರೋಪದಡಿ ಭವಾನಿ ರೇವಣ್ಣಗೆ ಬಂಧನ ಭೀತಿ
- ಈ ಪ್ರಕರಣ ಸಂಬಂಧ ವಿಚಾರಣೆ ಮುಂದೂಡಿದ ನ್ಯಾಯಾಲಯ
ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಅತ್ಯಾಚಾರ ಆರೋಪ ಪ್ರಕರಣದಲ್ಲಿನ ಸಂತ್ರಸ್ತೆಯೊಬ್ಬರ ಅಪಹರಣ ಆರೋಪದಡಿ ಭವಾನಿ ರೇವಣ್ಣ ಅವರಿಗೂ ಬಂಧನದ ಭೀತಿ ಎದುರಾಗಿದೆ. ಈ ಪ್ರಕರಣ ವಿಚಾರಣೆ ನಡೆಸುತ್ತಿರುವ ಎಸ್ಐಟಿ ವಿಚಾರಣೆಗೆ ಭವಾನಿ ರೇವಣ್ಣ ಹಾಜರಾಗುತ್ತಿಲ್ಲ. ಹೀಗಾಗಿ ಭವಾನಿ ಅವರನ್ನು ತನಿಖಾ ಅಧಿಕಾರಿಗಳು ಬಂಧಿಸುವ ಸಾಧ್ಯತೆ ಇದೆ. ಬಂಧನದಿಂದ ಪಾರಾಗಲು ಭವಾನಿ ರೇವಣ್ಣ ತಮ್ಮ ವಕೀಲರ ಮೂಲಕ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಇಂದು ಭವಾನಿ ರೇವಣ್ಣ ಅವರ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ನಡೆದಿದ್ದು, ನಾಳೆಗೆ ವಿಚಾರಣೆಯನ್ನು ಮುಂದೂಡಲಾಗಿದೆ. ಪೊಲೀಸರಿಂದ ಅಗತ್ಯ ಮಾಹಿತಿ ಪಡೆಯಬೇಕಾಗಿದೆ. ಹೀಗಾಗಿ ಹೆಚ್ಚಿನ ಕಾಲಾವಕಾಶವನ್ನು ನೀಡಬೇಂಕೆಂದು ಭವಾನಿ ಅವರ ಪರ ವಕೀಲರು ಕೋರ್ಟ್ಗೆ ಮನವಿ ಮಾಡಿದ್ದಾರೆ. ಇದನ್ನು ಪರಿಗಣಿಸಿದ ನ್ಯಾಯಾಧೀಶರು ವಿಚಾರಣೆಯನ್ನು ಮೇ 29 ಬುಧವಾರಕ್ಕೆ ಮುಂದೂಡಲಾಯಿತು.