ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಆರ್ಥಿಕ ಹಿಂಜರಿತ ಭೀತಿ ನಡುವೆಯೇ ಭಾರತೀಯ ಷೇರು ಮಾರುಕಟ್ಟೆ ಮೇಲೂ ಅದರ ಪರಿಣಾಮವಾಗಿದ್ದು, ಸೆನ್ಸೆಕ್ಸ್ ಬರೊಬ್ಬರಿ 1500ಕ್ಕೂ ಅಧಿಕ ಅಂಕಗಳ ಕುಸಿತಕಂಡಿದೆ. ಅಮೆರಿಕಾ ಆರ್ಥಿಕತೆ ಹಿಂಜರಿತ ಭೀತಿಯಿಂದಾಗಿ ಇಂದು ಷೇರು ಮಾರುಕಟ್ಟೆ ದಿನದ ಆರಂಭಿಕ ವಹಿವಾಟಿನಲ್ಲೇ 1500ಕ್ಕೂ ಹೆಚ್ಚು ಅಂಕಗಳನ್ನು ಕಳೆದುಕೊಂಡು 79,000 ಅಂಕಗಳಿಗೆ ಇಳಿಕೆಯಾಗಿದೆ. ನಿಫ್ಟಿ 50 ಕೂಡ 489.6 ಅಂಕಗಳ ಇಳಿಕೆಯೊಂದಿಗೆ 24,228.05 ಅಂಕಗಳಿಗೆ ಕುಸಿದಿದೆ.
ಅಮೆರಿಕ ಆರ್ಥಿಕ ಹಿಂಜರಿಕೆಯ ಭೀತಿ ಭಾರತೀಯ ಮಾರುಕಟ್ಟೆ ಮೇಲಷ್ಟೇ ಅಲ್ಲದೆ ಏಷ್ಯನ್ ಸ್ಟಾಕ್ ಮಾರ್ಕೆಟ್ ಮತ್ತು ಜಪಾನ್ ಮಾರುಕಟ್ಟೆ ಮೇಲೂ ಪರಿಣಾಮ ಬೀರಿದ್ದು, ನಕಾರಾತ್ಮಕ ವಹಿವಾಟಿಗೆ ಕಾರಣವಾಗಿದೆ. ಜಪಾನ್ ಮಾರುಕಟ್ಟೆ ಬರೊಬ್ಬರಿ ಶೇ.20ರಷ್ಟು ಕುಸಿತಗೊಂಡಿದ್ದು, ನಿಕ್ಕಿ 225 ಇಂಡೆಕ್ಸ್ 1600 ಅಂಕಗಳ ಕಡಿತದೊಂದಿಗೆ 34,247.56 ಅಂಕಗಳಿಗೆ ಕುಸಿದಿದೆ.
ರುಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ:
ಇನ್ನು ಷೇರು ಮಾರುಕಟ್ಟೆ ಕುಸಿತ ಬೆನ್ನಲ್ಲೇ ರುಪಾಯಿ ಮೌಲ್ಯ ಕೂಡ ಸಾರ್ವಕಾಲಿಕ ಕುಸಿತಗೊಂಡಿದ್ದು ಸೋಮವಾರ ಅಮೆರಿಕ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿದು ಪ್ರತೀ ಡಾಲರ್ ಗೆ 83.80 ರೂಗೆ ಏರಿಕೆಯಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ ಬಿಡ್ ಹೆಚ್ಚಾದ ಪರಿಣಾಮ ಈ ಬೆಳವಣಿಗೆ ಸಂಭವಿಸಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಭಾರತೀಯ ಈಕ್ವಿಟಿ ಮಾರುಕಟ್ಟೆಗಳ ಗಮನಾರ್ಹ ಕುಸಿತ ಕೂಡ ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ.
ಹೂಡಿಕೆದಾರರ 9.51 ಲಕ್ಷ ಕೋಟಿ ನಷ್ಟ:
ಇನ್ನು ಇಂದಿನ ವಹಿವಾಟಿನಲ್ಲಿ ಹೂಡಿಕೆದಾರರ ಸುಮಾರು 9.51 ಲಕ್ಷ ಕೋಟಿ ರೂ ನಷ್ಟವಾಗಿದೆ ಎಂದು ಹೇಳಲಾಗಿದೆ. ದಿನದ ಆರಂಭಿಕ ವಹಿವಾಟಿನಲ್ಲೇ ಸೆನ್ಸೆಕ್ಸ್ 2,401.49 ಅಂಕ ಕಡಿತವಾಗಿ 78,580.46 ಅಂಕಗಳಿಗೆ ಕುಸಿದಿತ್ತು. ಪರಿಣಾಮ ಬಿಎಸ್ಇ-ಲಿಸ್ಟೆಡ್ ಸಂಸ್ಥೆಗಳು ಬೆಳಗಿನ ವಹಿವಾಟಿನಲ್ಲಿ ರೂ.9,51,771.37 ಕೋಟಿಗಳಷ್ಟು ಕುಸಿದು ರೂ.4,47,65,174.76 ಕೋಟಿಗೆ (ಯುಎಸ್ಡಿ 5.35 ಟ್ರಿಲಿಯನ್) ತಲುಪಿವೆ. ಇದು 2020ರ ಮಾರ್ಚ್ 12 ಬಳಿಕ ಭಾರತೀಯ ಮಾರುಕಟ್ಟೆಯ 6ನೇ ಮಹಾ ಕುಸಿತ ಎಂದು ತಜ್ಞರು ಹೇಳಿದ್ದಾರೆ.